ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾಷಣ ಮಾಡಲು ಸ್ನೇಹಿತರಿಗಾಗಿ ಬರೆದು ಕೊಟ್ಟ ಲೇಖನ. ಇದಕ್ಕೆ ಯಾವುದೇ ಆಕರ ಬಳಸಿಲ್ಲ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಈ ದಿನ ನಿಮ್ಮೊಂದಿಗೆ ಕನ್ನಡ, ಕರ್ನಾಟಕದ ಬಗ್ಗೆ ಮಾತನಾಡುವುದು ನನಗೆ ಹೆಮ್ಮೆ ತರುವ ಸದಾವಕಾಶ. ಕರ್ನಾಟಕ ಭಾರತದಲ್ಲಷ್ಟೆ ಅಲ್ಲ, ಇಡೀ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿರುವ ರಾಜ್ಯ. ಇಲ್ಲಿ ಕಲೆ ಇದೆ, ಶಾಸ್ತ್ರೀಯ ಸಂಗೀತ ಇದೆ, ಅಪಾರ ಸಾಹಿತ್ಯ ಭಂಡಾರ ಇದೆ, ಅಷ್ಟೇ ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ವಿಶಿಷ್ಟ ಸ್ಥಾನ ಇದೆ. ನಮ್ಮ ರಾಜ್ಯವನ್ನು ಕಲೆ ಮತ್ತು ಸಂಸ್ಕೃತಿಯ ತವರೂರೆಂದೆ ಕರೆಯಬಹುದು.
ಕಲೆ ಮತ್ತು ಸಂಸ್ಕೃತಿಯನ್ನು ಇಲ್ಲಿನ ರಾಜವಂಶಗಳಾದ ಗಂಗರು, ಕದಂಬರು, ರಾಷ್ಟ್ರಕೂಟರು..ಇನ್ನೂ ಹಲವರು ಪ್ರೋತ್ಸಾಹಿಸಿ, ಬೆಳೆಸಿದರು. ಬೇಲೂರು, ಹಂಪಿ, ಬಾದಾಮಿ ಮುಂತಾದ ಸ್ಥಳಗಳು ಶಿಲ್ಪಕಲೆ, ನಾಟ್ಯ, ಸಂಗೀತಕ್ಕೆ ಇದ್ದ ಪ್ರಾಮುಖ್ಯತೆಯನ್ನು ಬಿಂಬಿಸುತ್ತವೆ. ನೋಡುಗರ ಕಣ್ಮುಂದೆ ಇಲ್ಲಿ ಕಲ್ಲುಗಳು ನರ್ತಿಸುತ್ತವೆ.. ದಕ್ಷಿಣ ಭಾರತದಲ್ಲಿ ನೋಡಿದರೆ ನಮ್ಮ ಕರ್ನಾಟಕದಲ್ಲಿಯೇ ಶಿಲ್ಪಕಲೆ ಅತಿ ಹೆಚ್ಚು ಬೆಳೆದಿದೆ.. ಹಿಂದೆ ರಾಜ ಮಹಾರಾಜರೇ ಕಲೆಯನ್ನು ಎಷ್ಟರಮಟ್ಟಿಗೆ ಪೋಷಿಸುತ್ತಿದ್ದರು, ಆರಾಧಿಸುತ್ತಿದ್ದರು ಎನ್ನುವುದಕ್ಕೆ ಉದಾಹರಣೆ ..ಸ್ವಂತ ಅವರೇ ಸಂಗೀತವನ್ನು ರಚಿಸಿರುವ ನಮ್ಮ ಮಹಾರಾಜ ಜಯಚಾಮರಾಜೇಂದ್ರ ವಡೆಯರ್ !
ಇಲ್ಲಿನ ಸಂಸ್ಕೃತಿ ವಿಶಿಷ್ಟವಾದದ್ದು. ಕೊಂಕಣದಲ್ಲಿ ಯಕ್ಷಗಾನ ತಾಳ ಮೇಳದ ಆಕರ್ಷಣೆ ಮಾತ್ರವಲ್ಲದೆ, ವಿಶ್ವ ಪ್ರಸಿದ್ಧ ಉಡುಪಿಯ ಕೃಷ್ಣ ಮುಂತಾದ ಅನೇಕ ದೇವಾಲಯಗಳಿವೆ. ಉತ್ತರ ಕರ್ನಾಟಕ.. ಇಲ್ಲಿ ವಿಜಯನಗರದ ವೈಭವ, ಬಿಜಾಪುರದ ಗೋಲ್ ಗುಂಬಜ್, ಬಾದಾಮಿ ಪ್ರಸಿದ್ಧ. ಮೈಸೂರು ಪ್ರಾಂತ್ಯದ ನವರಾತ್ರಿ, ಅಂಬಾರಿಯ ಗಾಂಭೀರ್ಯ, ಮೆರವಣಿಗೆ, ಬೇಲೂರು ಹಳೇಬೀಡಿನ ವಾಸ್ತುಶಿಲ್ಪ, ಇವೆಲ್ಲವೂ ಆಕರ್ಷಕ, ಮನಮೋಹಕ.
ಇನ್ನು ನಾಡಿನ ರಾಜದಾನಿ ಬೆಂಗಳೂರು, ವಿಜ್ಞಾನ, ತಂತ್ರಜ್ಞಾನಕ್ಕೆ ಪ್ರಸಿದ್ದಿ. ನೋಬಲ್ ಪಾರಿತೋಷಕ ಪಡೆದ ರಾಮನ್ ಅವರ ಕಾರ್ಯಕ್ಷೇತ್ರ ಇದು. ಅವರ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್, ಟಾಟಾ ಇನ್ಸ್ಟಿಟ್ಯೂಟ್, ವಿಜ್ಞಾನದ ಮೇರು ಸಂಸ್ಥೆ. ಜಗತ್ತು ಬೆರಗಾಗುವಂತೆ ಬೆಳೆದಿರುವ ಬಾಹ್ಯಾಕಾಶ ತಂತ್ರ ಜ್ಞಾನದ ಪ್ರಧಾನ ಕಛೇರಿ, ಮತ್ತು ಉಪಗ್ರಹದ ಉತ್ಪಾದನೆಯ ಮುಖ್ಯ ಕಾರ್ಯ ಇಲ್ಲಿಯೇ ನಡೆಯುವುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುವ ಹೆಮ್ಮೆ ಬೆಂಗಳೂರಿನ ಜನತೆಯದು.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ. ಆದಿಕವಿ ಪಂಪ, ರನ್ನ, ಜನ್ನ, ನಾಗವರ್ಮರಿಂದ ಹಿಡಿದು ಇಂದಿನ ಕುವೆಂಪು, ಬೇಂದ್ರೆ, ಕಾರಂತರ ತನಕ ಸಾಹಿತ್ಯ ವಿಪುಲವಾಗಿ ಬೆಳೆದಿದೆ... ಕನ್ನಡಕ್ಕೆ ದೊರೆತಿರುವ 8 ಜ್ಞಾನಪೀಠ ಪ್ರಶಸ್ತಿಗಳೇ ಇದಕ್ಕೆ ಸಾಕ್ಷಿ. ವಚನಗಳು, ದಾಸರ ಪದಗಳು ಆಧ್ಯಾತ್ಮ ಅಲ್ಲದೆ ಸಾಹಿತ್ಯಕ್ಕೂ ದೊಡ್ಡ ಕೊಡುಗೆ. ಬಿ ವಿ ಕಾರಂತ, ಗಿರೀಶ್ ಕಾರ್ನಾಡ್, ಗುಬ್ಬಿ ವೀರಣ್ಣ ಮುಂತಾದವರು ರಂಗಭೂಮಿಯನ್ನು ಶ್ರೀಮಂತ ಗೊಳಿಸಿದ್ದಾರೆ.
ಮನುಜಮತ ವಿಶ್ವಪಥ, ವಸುದೈವ ಕುಟುಂಬಕಂ, ಇದು ಹಿರಿಯರ ನುಡಿ. ಇಲ್ಲಿ ಎಲ್ಲರಿಗೂ ಆದರವಿದೆ, ಅವಕಾಶವಿದೆ. ನೆಮ್ಮದಿಯ ಬಾಳು. ಭಾಷೆ ಕೇವಲ ಸಂಪರ್ಕಕ್ಕೆ ಮಾತ್ರವಲ್ಲ, ಭಾಷೆ ಸಂಸ್ಕೃತಿ ಯ ಸಂಕೇತ. ನಾವೆಲ್ಲರೂ ಕನ್ನಡ ಮಾತನಾಡೋಣ. ಸರಳವಾಗಿ ಮಾತನಾಡಲು ಹೇಳಿ ಕೊಡೋಣ. ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಗಲ್ಲಿ ಗಲ್ಲಿಗೆ
ಆಹಾ ಓದಿ ಅನಂದವಾಯಿತು
ReplyDeleteಹಾಗೆ ಸಾಹಿತ್ಯಕ್ಕೆ ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ, ತಿ ನಂ ಶ್ರೀ ರವರ ಭಾರತೀಯ ಕಾವ್ಯ ಮೀಮಾಂಸೆ..., ಇಷ್ಟು ಶ್ರೀಮಂತ ಭಾಷೆಯನ್ನು ಸೊರಗಲು ಬಿಟ್ಟಿರುವುದು, ಆಂಗ್ಲ ಧಾಳಿಯಿಂದ ಕಂಗಾಲು ಗೊಳಿಸಿರುವುದು ಕನ್ನಡಿಗರೇ, ಇದು ಎಂಥಾ ವಿಪರ್ಯಾಸ
ಹೌದು, ಇಲ್ಲಿ ಪರಕಿಯಾರಿಗಿಂತ, ನಮ್ಮ ಜವಾಬ್ದಾರಿ ಹೆಚ್ಚು. ಕನ್ನಡ ಮಾತನಾಡುವುದು ಕೀಳು.. ಹಿಂದಿ ಮಾತನಾಡುವುದು ಸ್ಟೈಲು ಆಗಿದೆ. ವಿಪರ್ಯಾಸ.
Delete