Saturday, December 21, 2019

ಮೂಕಜ್ಜಿಯ ಕನಸುಗಳು.

ಮೂಕಜ್ಜಿಯ ಕನಸುಗಳು.. ಎಲ್ಲಾ ಸಹೃದಯರು ನೋಡಲೇಬೇಕಾದ ಚಿತ್ರ..ಈ ಚಿತ್ರ ವೀಕ್ಷಿಸಿದ್ದು ನಮ್ಮ ಅದೃಷ್ಟ.  ಶಿವರಾಮ ಕಾರಂತರಿಗೆ ಜ್ಞಾನಪೀಠ ತಂದು ಕೊಟ್ಟ ಮೇರು ಕೃತಿ.

P ಶೇಷಾದ್ರಿಯವರ ನಿರ್ದೇಶನ,  ಮುಖ್ಯ ಪಾತ್ರದಲ್ಲಿ ಮೂಕಜ್ಜಿಯಾಗಿ B ಜಯಶ್ರೀ, ಭಾಸ್ಕರ್ ಅವರ ಛಾಯಾಗ್ರಹಣ.. ಮೃಷ್ಟಾನ್ನ ಭೋಜನ.   ಬೇರೆ ಚಿತ್ರದಂತೆ ಹಾಡಿಲ್ಲ, ಡಾನ್ಸ್ ಇಲ್ಲ.. ಫೈಟಿಂಗ್ ಇಲ್ಲ.  ಆದರೂ ಕತೆಯ ಹಂದರ, ಹೇಳುವ ಬಿಗಿತನ  ಎಲ್ಲೂ ಬೋರ್ ಆಗುವುದಿಲ್ಲ.  ಆಲದ ಮರದ  ಕೆಳಗೆ ಕುಳಿತ ಬಾಲ ವಿಧವೆ ಮೂಕಾಂಬಿಕಾ, ಮೂಕಿ ಮತ್ತು ಮೂಕಜ್ಜಿ ಆದದ್ದೇ ಮುಖ್ಯ ಕಥೆ.  ಆಡುವ ವಯಸ್ಸಿನಲ್ಲಿ ವಿಧವೆಯಾಗಿ, ಐಹಿಕ ಆಸೆ ಬಿಟ್ಟು, ಪ್ರಯಾಣದುದ್ದಕ್ಕೂ ಪಟ್ಟ ಪಾಡು, ನೋಡಿಯೇ ತೀರಬೇಕು..
 ದೇವರನ್ನೇ ಪ್ರಶ್ನೆ ಮಾಡಿ, ಎಲ್ಲರ ಪ್ರಶ್ನೆಗೆ ಸಮಂಜಸ ಉತ್ತರ ಕೊಡುವ ಅಜ್ಜಿ, ಕೆಲವೊಮ್ಮೆ ಅತಿಮಾನುಷ ಶಕ್ತಿಯನ್ನು ತೋರಿಸುತ್ತಾರೆ.  ದೈಹಿಕ ಆಸೆಗಾಗಿ ಗಂಡನನ್ನು ಬಿಟ್ಟು, ಸಾಹುಕಾರನ ಸಹವಾಸ ಮಾಡಿದ ನಾಗಿ ರಮಣ್ಣರ ಕಥೆ ಒಂದಾದರೆ, ಅದನ್ನು ಸಮರ್ಥಿಸುವ ಅಜ್ಜಿ, ಸಲಿಂಗ ಕಾಮ ವಿರೋಧಿಸುತ್ತಾರೆ.

ಹೆಚ್ಚೇನು ಓದಿರದ ಅವರ ಚಿಂತನೆ, ಕೆಲವೊಮ್ಮೆ ತತ್ವ, ಶಾಸ್ತ್ರವಾಗಿ ಕಂಡರೆ, ಅದು ಅವರ ಜೀವನದ ಅನುಭವವಷ್ಟೆ.
ದೇವರು ಇದ್ದಾನೆಯೇ? ಅಂದರೆ 'ದೇವರನ್ನು ನಂಬಿದರೆ ಇದ್ದಾನೆ, ಇಲ್ಲ ಅಂದರೆ ಇಲ್ಲ'. ಅಂತ ಸುಲುಭವಾಗಿ ಉತ್ತರಿಸುತ್ತಾರೆ..

ಒಟ್ಟಿನಲ್ಲಿ, ನಮ್ಮೆಲ್ಲರೊಳಗಿರುವ
ಮಲಕು ಹಾಕುವ ಸ್ವಭಾವವನ್ನು ಅಜ್ಜಿ ಬಿಂಬಿಸುತ್ತಾರೆ..

 ಶಿವರಾಮ ಕಾರಂತರು ಅಜ್ಜಿಯಾ? ಎಂಬ ಸಂಶಯ.
ಚಿತ್ರ  ನೋಡುವ ಪ್ರಯತ್ನ ಮಾಡಿ.. ಉಂಡವನೆ ಕಂಡಿಹನು ಅದರ ಹದನು.

Wednesday, November 13, 2019

ಕನ್ನಡ ರಾಜ್ಯೋತ್ಸವ



ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾಷಣ ಮಾಡಲು ಸ್ನೇಹಿತರಿಗಾಗಿ ಬರೆದು ಕೊಟ್ಟ ಲೇಖನ. ಇದಕ್ಕೆ ಯಾವುದೇ ಆಕರ ಬಳಸಿಲ್ಲ

 ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

     ಈ ದಿನ ನಿಮ್ಮೊಂದಿಗೆ ಕನ್ನಡ, ಕರ್ನಾಟಕದ ಬಗ್ಗೆ ಮಾತನಾಡುವುದು ನನಗೆ ಹೆಮ್ಮೆ ತರುವ ಸದಾವಕಾಶ. ಕರ್ನಾಟಕ ಭಾರತದಲ್ಲಷ್ಟೆ ಅಲ್ಲ, ಇಡೀ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿರುವ ರಾಜ್ಯ. ಇಲ್ಲಿ ಕಲೆ ಇದೆ, ಶಾಸ್ತ್ರೀಯ ಸಂಗೀತ ಇದೆ, ಅಪಾರ ಸಾಹಿತ್ಯ ಭಂಡಾರ ಇದೆ, ಅಷ್ಟೇ ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ವಿಶಿಷ್ಟ ಸ್ಥಾನ ಇದೆ. ನಮ್ಮ ರಾಜ್ಯವನ್ನು ಕಲೆ ಮತ್ತು ಸಂಸ್ಕೃತಿಯ ತವರೂರೆಂದೆ ಕರೆಯಬಹುದು.

     ಕಲೆ ಮತ್ತು ಸಂಸ್ಕೃತಿಯನ್ನು ಇಲ್ಲಿನ ರಾಜವಂಶಗಳಾದ ಗಂಗರು, ಕದಂಬರು, ರಾಷ್ಟ್ರಕೂಟರು..ಇನ್ನೂ ಹಲವರು ಪ್ರೋತ್ಸಾಹಿಸಿ, ಬೆಳೆಸಿದರು.    ಬೇಲೂರು, ಹಂಪಿ, ಬಾದಾಮಿ ಮುಂತಾದ ಸ್ಥಳಗಳು ಶಿಲ್ಪಕಲೆ, ನಾಟ್ಯ, ಸಂಗೀತಕ್ಕೆ ಇದ್ದ ಪ್ರಾಮುಖ್ಯತೆಯನ್ನು ಬಿಂಬಿಸುತ್ತವೆ. ನೋಡುಗರ ಕಣ್ಮುಂದೆ ಇಲ್ಲಿ ಕಲ್ಲುಗಳು ನರ್ತಿಸುತ್ತವೆ.. ದಕ್ಷಿಣ ಭಾರತದಲ್ಲಿ ನೋಡಿದರೆ ನಮ್ಮ ಕರ್ನಾಟಕದಲ್ಲಿಯೇ ಶಿಲ್ಪಕಲೆ ಅತಿ ಹೆಚ್ಚು ಬೆಳೆದಿದೆ..  ಹಿಂದೆ ರಾಜ ಮಹಾರಾಜರೇ ಕಲೆಯನ್ನು ಎಷ್ಟರಮಟ್ಟಿಗೆ ಪೋಷಿಸುತ್ತಿದ್ದರು, ಆರಾಧಿಸುತ್ತಿದ್ದರು ಎನ್ನುವುದಕ್ಕೆ ಉದಾಹರಣೆ ..ಸ್ವಂತ ಅವರೇ ಸಂಗೀತವನ್ನು ರಚಿಸಿರುವ ನಮ್ಮ ಮಹಾರಾಜ ಜಯಚಾಮರಾಜೇಂದ್ರ ವಡೆಯರ್ !

     ಇಲ್ಲಿನ ಸಂಸ್ಕೃತಿ ವಿಶಿಷ್ಟವಾದದ್ದು.  ಕೊಂಕಣದಲ್ಲಿ ಯಕ್ಷಗಾನ ತಾಳ ಮೇಳದ ಆಕರ್ಷಣೆ ಮಾತ್ರವಲ್ಲದೆ, ವಿಶ್ವ ಪ್ರಸಿದ್ಧ ಉಡುಪಿಯ ಕೃಷ್ಣ ಮುಂತಾದ ಅನೇಕ ದೇವಾಲಯಗಳಿವೆ.    ಉತ್ತರ ಕರ್ನಾಟಕ.. ಇಲ್ಲಿ ವಿಜಯನಗರದ ವೈಭವ, ಬಿಜಾಪುರದ ಗೋಲ್ ಗುಂಬಜ್, ಬಾದಾಮಿ ಪ್ರಸಿದ್ಧ. ಮೈಸೂರು ಪ್ರಾಂತ್ಯದ ನವರಾತ್ರಿ, ಅಂಬಾರಿಯ ಗಾಂಭೀರ್ಯ, ಮೆರವಣಿಗೆ, ಬೇಲೂರು ಹಳೇಬೀಡಿನ  ವಾಸ್ತುಶಿಲ್ಪ, ಇವೆಲ್ಲವೂ ಆಕರ್ಷಕ, ಮನಮೋಹಕ.

     ಇನ್ನು ನಾಡಿನ ರಾಜದಾನಿ ಬೆಂಗಳೂರು, ವಿಜ್ಞಾನ, ತಂತ್ರಜ್ಞಾನಕ್ಕೆ ಪ್ರಸಿದ್ದಿ.  ನೋಬಲ್ ಪಾರಿತೋಷಕ ಪಡೆದ   ರಾಮನ್ ಅವರ ಕಾರ್ಯಕ್ಷೇತ್ರ ಇದು.  ಅವರ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್, ಟಾಟಾ ಇನ್ಸ್ಟಿಟ್ಯೂಟ್, ವಿಜ್ಞಾನದ ಮೇರು ಸಂಸ್ಥೆ.  ಜಗತ್ತು ಬೆರಗಾಗುವಂತೆ ಬೆಳೆದಿರುವ ಬಾಹ್ಯಾಕಾಶ ತಂತ್ರ ಜ್ಞಾನದ ಪ್ರಧಾನ ಕಛೇರಿ, ಮತ್ತು ಉಪಗ್ರಹದ ಉತ್ಪಾದನೆಯ ಮುಖ್ಯ ಕಾರ್ಯ ಇಲ್ಲಿಯೇ ನಡೆಯುವುದು.   ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುವ ಹೆಮ್ಮೆ ಬೆಂಗಳೂರಿನ ಜನತೆಯದು.

     ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ.    ಆದಿಕವಿ ಪಂಪ, ರನ್ನ,  ಜನ್ನ, ನಾಗವರ್ಮರಿಂದ ಹಿಡಿದು ಇಂದಿನ ಕುವೆಂಪು, ಬೇಂದ್ರೆ, ಕಾರಂತರ ತನಕ ಸಾಹಿತ್ಯ ವಿಪುಲವಾಗಿ ಬೆಳೆದಿದೆ... ಕನ್ನಡಕ್ಕೆ ದೊರೆತಿರುವ 8 ಜ್ಞಾನಪೀಠ ಪ್ರಶಸ್ತಿಗಳೇ  ಇದಕ್ಕೆ ಸಾಕ್ಷಿ.  ವಚನಗಳು, ದಾಸರ ಪದಗಳು ಆಧ್ಯಾತ್ಮ ಅಲ್ಲದೆ ಸಾಹಿತ್ಯಕ್ಕೂ ದೊಡ್ಡ ಕೊಡುಗೆ.   ಬಿ ವಿ ಕಾರಂತ, ಗಿರೀಶ್ ಕಾರ್ನಾಡ್, ಗುಬ್ಬಿ ವೀರಣ್ಣ ಮುಂತಾದವರು ರಂಗಭೂಮಿಯನ್ನು ಶ್ರೀಮಂತ ಗೊಳಿಸಿದ್ದಾರೆ.


   ಮನುಜಮತ ವಿಶ್ವಪಥ, ವಸುದೈವ ಕುಟುಂಬಕಂ, ಇದು ಹಿರಿಯರ ನುಡಿ.  ಇಲ್ಲಿ ಎಲ್ಲರಿಗೂ ಆದರವಿದೆ, ಅವಕಾಶವಿದೆ.  ನೆಮ್ಮದಿಯ ಬಾಳು.  ಭಾಷೆ ಕೇವಲ ಸಂಪರ್ಕಕ್ಕೆ ಮಾತ್ರವಲ್ಲ, ಭಾಷೆ ಸಂಸ್ಕೃತಿ ಯ ಸಂಕೇತ.  ನಾವೆಲ್ಲರೂ ಕನ್ನಡ  ಮಾತನಾಡೋಣ.  ಸರಳವಾಗಿ ಮಾತನಾಡಲು ಹೇಳಿ ಕೊಡೋಣ.  ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗೆಲ್ಗೆ..  ಸಿರಿಗನ್ನಡಂ ಗಲ್ಲಿ ಗಲ್ಲಿಗೆ



Wednesday, March 27, 2019

ಐವತ್ತರ ಆಸು ಪಾಸು....




     ವಯಸ್ಸು ಐವತ್ತಾಯ್ತು.  ಚಾತುರ್ವರ್ಣದ  ಎರಡನೇ ಆಶ್ರಮಕ್ಕೆ ತೆರೆ ಬಿಳಬೀಕಿತ್ತು.  ಊರು ಹೋಗು ಅನ್ನತ್ತಿದೆ.  ಕಾಡು ಕಾಣದಾಗಿದೆ.   ಯಾಕೋ ಜೀವನೋತ್ಸಾಹ ಕಡಿಮೆ ಆಗಿಲ್ಲ.  ಲೌಕಿಕ ಆಸೆಗಳು, ನಮ್ಮ ತಮ್ಮವರ ಮೇಲಿನ ಮಮತೆ ಕುಂದಿಲ್ಲ.  ಒಂದೇ ದಿನದಲ್ಲಿ ಯಾವುದೂ ಬದಲಾಗುವುದಿಲ್ಲ ಅಂತ ತಿಳಿದಿದೆ.  ಈ ಮೈಲಿಗಲ್ಲುಗಳು ಹೀಗೆಯೇ, ಒಮ್ಮೆ ಹಿಂದೆ ನೋಡುವ, ಮುಂದಿನದನ್ನು ಯೋಚಿಸುವ ಪ್ರಚೋದನೆ ನೀಡುತ್ತವೆ.  ಹೀಗೆಯೇ ಒಂದು ಸಣ್ಣ ಬರಹ.  

    ಹಿಂದೆನದನ್ನು ನೆನಪಿಸಿದರೆ ಭಯ ಅನಿಸುತ್ತದೆ.  ಅಮ್ಮ ಇಲ್ಲದೆ ಮೂವತ್ತು ವರ್ಷ ಬದುಕಾಗಿದೆ.  .   ಎಷ್ಟೋ ಜನರನ್ನ ಕಾಲಗರ್ಭ ನುಂಗಿಹಾಕಿದೆ. ಬದುಕಿನ ಬಂಡಿ ಸಾಗುತ್ತಲೇ ಇದೆ.  ಬಂಡಿ ಹತ್ತಿದವರು ಎಷ್ಟೋ , ಇಳಿದವರು ಎಷ್ಟೋ.  ಕೆಲವರು ಮಾತ್ರ ಹಲವು ವರ್ಷಗಳಿಂದ ಸಾಗಿದ್ದಾರೆ.  ರೂಪ ಬಂಡಿಯ ಚಕ್ರವಾಗಿದ್ದಾಳೆ.  ಅದಿತಿಯಲ್ಲಿ ಆದರ್ಶ ಕಂಡಾಗಿದೆ.  ಜೀವನ ತೃಪ್ತಿ ನೀಡಿದೆ.  Blessed ಅನಿಸುತ್ತದೆ.    ಈ ಬಂಡಿ ಓದುಗರಿಗೆ ಬೋರ್ ಮಾಡದೆ ಮುಂದುವರೆಸುವ ಪ್ರಯತ್ನ

    ಇನ್ನು ಮುಂದಿನ ದಾರಿಯ ಸಿದ್ಧತೆಯನ್ನು ಮಾಡಬೇಕಿದೆ.  ಇದು ನನಗೆ ನಾನೇ ಮಾಡಿಕೊಂಡಿರುವ checklist.  
  • ದೈಹಿಕ ಶಕ್ತಿ  ಕ್ರಮೇಣ ಕುಂದಲೇಬೇಕು.  ಕೈ ಉಳುಕಿದೆ, ಮಂಡಿ ನೋವು, ಬೆನ್ನು ನೋವು ಇತ್ಯಾದಿಗಳನ್ನು ಸಹಜವಾಗಿ ಸ್ವೀಕರಿಸುವ ಮಾನಸಿಕ ಶಕ್ತಿ ಬೇಕಾಗಿದೆ. ಆಸ್ಪತ್ರೆಗಳ ಓಡಾಟ, ವೈದ್ಯರ, diagnostic center ಗಳಲ್ಲಿ ಕಾಲಕಳೆಯಬೇಕಾಗಿದೆ
  •  ನಮ್ಮ ಮಾತು, ಚಿಂತನೆಗಳಿಗೆ ಬೆಲೆ ಕಡಿಮೆ.  ಬೇಸರವಿಲ್ಲದೆ ಇದನ್ನು ಒಪ್ಪಿಕೊಳ್ಳಬೇಕಿದೆ..    ಚಿಕ್ಕ ವಯಸ್ಸಿನವರ ವರ್ತನೆಗಳು ಕೆಲವೊಮ್ಮೆ ಇಷ್ತವಾಗದಿದ್ದರೂ ನಿಂದಿಸದೆ,   ಅವರೊಡನೆ ಹೊಂದಿ ಬಾಳುವ ಸಾಮರ್ಥ್ಯ ಬೆಳಸಿಕೊಳ್ಳಬೇಕಿದೆ.  ಯಾವುದೊ ಗತಕಾಲದ ವೈಭವವನ್ನು ಬಣ್ಣ ಕಟ್ಟಿ ಬೇಜಾರು ಮಾಡಿಕೊಳ್ಳದೆ,  ಬಂದಿದ್ದನ್ನು, ನಗು ನಗುತ ಸ್ವೀಕರಿಸುವ ಮನಸನ್ನು ರೂಡಿಸಿ ಕೊಳ್ಳಬೇಕಿದೆ.  ಹಣ್ಣೆಲೆ ಬೀಳಬೇಕು.  ಚಿಗುರು ಮೂಡಲೇ ಬೇಕು, ಇದು ನಿಸರ್ಗದ ನಿಯಮ.
  • ಹಣ ಎಷ್ಟಾದರೂ ಸಾಲದು. ಅದಕ್ಕಾಗಿ Rat race ನಡೆಸಿದ್ದು ಸಾಕು.  ನಮಗೆ ಇಷ್ಟ ಬಂದದನ್ನು, ಖುಶಿಯಿಂದ ಮಾಡುವ  ಆರ್ಥಿಕ ಭದ್ರತೆ ಇರವುದನ್ನು ಗುರುತಿಸಬೇಕಾಗಿದೆ.
  • ಐಹಿಕ ಭೋಗಕ್ಕಿಂತ ಸ್ವಾರ್ಥರಹಿತ ಸೇವಾ ಭಾವದಲ್ಲಿ ತೃಪ್ತಿ ಕಾಣಬೇಕಿದೆ.  ಸಮವಯಸ್ಕರ ಒಡನಾಟ,  ಸ್ನೇಹಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಿದೆ.
  • ಸಮಯ ಹೆಚ್ಚು ಸಿಗಲಿದೆ.  ಓಡುವ ವೇಗ ಕಡಿಮೆಯಾಗಲಿದೆ.  ನಿವೃತ್ತ ಜೀವನದ ಒಂದು ಮಜಲು ಸಿಗುವ ವಿರಾಮ.  ಏನಾದರು ಹವ್ಯಾಸದಲ್ಲಿ ತೊಡಗಿಸಿ ಕೊಳ್ಳಬೇಕು.  ಬೇರೆಯವರಿಗೆ ತೊಂದರೆ ಕೊಡದೇ ಸಮಯವನ್ನು ಬೇಕಾದ ಹಾಗೆ ಕಳೆಯಬೇಕು
  • ಜೀವನದ ಈ ಘಟ್ಟದಲ್ಲಿ  ಪ್ರತಿಕ್ಷಣವನ್ನು ಆಂದಿಸಿ,  ನಾಲ್ಕು ಜನರಿಗೆ ಕೈಲಾದ ಸಹಾಯ ಮಾಡಬೇಕಾಗಿದೆ
  ಎಷ್ಟೊಂದು ಜನರ ಆಶೀರ್ವಾದ, ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ಮುಂದಿನ ಪ್ರಯಾಣಕ್ಕೆ ಜೊತೆ ಇರುತ್ತೀರಲ್ಲವೇ ?

        ಎಲ್ಲಿಗೇ ಪಯಣ.. ಯಾವುದೋ ದಾರೀ....