Wednesday, October 30, 2024

ಉತ್ತರ ಭಾರತ ಪ್ರವಾಸ - ಮಮತಾ ಭಾಮಾ

ಉತ್ತರ ಭಾರತದ ಒಂದು ಅದ್ಬುತ ಪ್ರವಾಸದ ಸುಮಧುರ ಘಳಿಗೆಗಳನ್ನು ನೆನಪುಗಳಾಗಿ ಹಿಡಿದಿಡುವತ್ತ ಒಂದು ಪ್ರಯತ್ನ ಈ ಬರಹ

'ಹಿಂದು ಧರ್ಮವೇ ಭಾರತದಲ್ಲಿ ಇರಲಿಲ್ಲ. ನಮ್ಮ ಪವಿತ್ರ ಗ್ರಂಥಗಳೆಲ್ಲಾ ಒಂದು ಕಾಲ್ಪನಿಕ ಸೃಷ್ಟಿ' ಅಂತ ಲೇವಡಿ ಮಾಡುವ ಅಧಮರಿಗೆ ಉತ್ತರಿಸಲು ಬೇಕಾದ ಸಾಕ್ಷಿಗಳ ಸಂಗ್ರಹಣೆ ಮತ್ತು ಹಂಚಿಕೊಳ್ಳುವುದು ಬರಹದ ಉದ್ದೇಶ ಸನಾತನ ಧರ್ಮವನ್ನು ಹೀಯಾಳಿಸಿ ತಮ್ಮ ಇರುವಿಕೆ ಪ್ರದರ್ಶಿಸುವ ಪ್ರಚಾರ ಪ್ರಿಯರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ.ಇಂದಿನ ಯುವ ಪೀಳಿಗೆ ಧರ್ಮ, ಸಂಸ್ಕೃತಿಯ ಬಗ್ಗೆ ಉದಾಸೀನ ತೋರುತ್ತಿರುವುದು ಆತಂಕಕಾರಿ ವಿಷಯವೂ ಹೌದು. ಪ್ಲ್ ಯಾರನ್ನೋ ಓಲೈಸಲು ತಮ್ಮದೇ ಧರ್ಮವನ್ನು ಟೀಕಿಸುವ ಬಕೆಟ್ ಗಿರಾಕಿಗಳಿಗೆ ಉತ್ತರಿಸಬೇಕಾದರೆ ನಮ್ಮ ತೀರ್ಥಕ್ಷೇತ್ರಗಳ ಭೇಟಿಯಾಗಬೇಕು ಮತ್ತು ಅದರ ಸ್ಥಳ ಮಹಾತ್ಮೆಯನ್ನು ತಿಳಿಯಬೇಕು.ಸಂದರ್ಭೋಚಿತ ಸಾಕ್ಷಿಗಳ ಕಲೆ ಹಾಕಿ ಇತರರಿಗೂ ತಿಳಿಸಬೇಕು. ಮಾಹಿತಿ ಅರಿತು ನಿಜಕ್ಕೂ ಚರ್ಚೆಗೆ ಕುಳಿತರೆ ಆ ಹುಚ್ಚರ ಮುಖಭಂಗ ಖಂಡಿತಾ.

ಹಿಂದೆ ಚಾರ್ ಧಾಮ್ ಬಗ್ಗೆ 5 ಕಂತುಗಳಲ್ಲಿ ಬರೆದಿದ್ದೆ. ಈ ಬಾರಿ ನಮ್ಮ ಪ್ರವಾಸ ಉತ್ತರ ಪ್ರದೇಶದ ನೈಮಿಷಾರಣ್ಯದಿಂದ ಪ್ರಾರಂಭವಾಯ್ತು, ಲಕ್ನೋ ತನಕ ವಿಮಾನ ನಂತರ ನಮ್ಮದೇ ವೈಯಕ್ತಿಕ ಸಾರಿಗೆವ್ಯವಸ್ಥೆ ಮಾಡಿಕೊಂಡಿದ್ದೆವು.

   *********************************************************************************

                                     ನೈಮಿಷಾರಣ್ಯ

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳವೇ ಈ ನೈಮಿಷಾರಣ್ಯ.ಹಿಂದೂಗಳಿಗೆ ಒಂದು ಪವಿತ್ರ ಜಾಗ ಮತ್ತು ಶಕ್ತಿ ಪೀಠ, ಅಂದರೆ ದಕ್ಷಯಜ್ಞದ ನಂತರ ಅರೆಬೆಂದ ದಾಕ್ಷಯಣಿಯ ದೇಹವನ್ನು ಶಿವನು ತನ್ನ ಭುಜದ ಮೇಲೆ ಹೊತ್ತು ತಿರುಗುವಾಗ ದೇಹದ ಒಂದು ಭಾಗ ಇಲ್ಲಿ ಬಿದ್ದುದರಿಂದ  ಅದು ಶಕ್ತಿ, ದಾಕ್ಷಯಣಿಯ ದೇಹ 52 ಭಾಗ ಭಾರತದ ಹಲವೆಡೆ ಬಿದ್ದು, ಆ ಸ್ಥಳ ಶಕ್ತಿ ಪೀಠಗಳೆಂದು ಪ್ರಸಿದ್ಧವಾಗಿದೆ.  ಅಷ್ಟಭುಜದ ಲಲಿತಾ ದೇವಿ ಸನ್ನಿಧಾನವು ಇಲ್ಲಿದೆ. ದೇಗುಲದ ಮುಂದೆ 40 ಅಡಿಯ ವಿಷ್ಣು ಮತ್ತು ಮುಂದೆ ರುದ್ರದೇವರ ಪ್ರತಿಮೆಯು ಇದೆ. ನೈಮಿಷಾರಣ್ಯ ಅಂದರೆ ಅದೊಂದು ಕಾಡು ಇರ್ಬೇಕು ಅಂದು ಕೊಳ್ಳುತ್ತೇವೆ. ನೇಮಿ ಎನ್ನುವ ರಾಕ್ಷಸನ ಹರಣವಾದದ್ದು ಇಲ್ಲಿ, ದೇವತೆಗಳ ಬೇಡಿಕೆ ಮೇರೆಗೆ ಬ್ರಹ್ಮ ದೇವ ಚಕ್ರವನ್ನು ಬಿಟ್ಟಾಗ ಅದು ಬಂದು ನಿಂತ ಸ್ಥಳವೇ ಈ ನೈಮಿಷ. ಇಲ್ಲಿಯೇ ವ್ಯಾಸರಿಂದ ಪುರಾಣ ಭಾಗವತ ಮತ್ತು ನಾಲ್ಕು ವೇದಗಳ ಸೃಷ್ಟಿಯಾದದ್ದು.ಬ್ರಹ್ಮನ ಚಕ್ರ ಬಿದ್ದಲ್ಲಿ ಚಕ್ರತೀರ್ಥ ಎನ್ನುವ ಕೊಳವಿದೆ ಚಕ್ರದಾಕಾರದಲ್ಲಿಯೇ ಇದೆ.ಇಲ್ಲಿ ಮಿಂದರೆ ಹಲವು ಜನ್ಮಗಳ ಪಾಪ ಕಳೆಯುತ್ತದೆ. ಋಷಿ ಮುನಿಗಳು ನಡೆದಾಡಿದ ಜಾಗವಾದ್ದರಿಂದ ಒಂದು ಹೆಜ್ಜೆ ನಡೆದರೂ ಹಲವು ಅಶ್ವಮೇಧಯಾಗ ಮಾಡಿದ ಪುಣ್ಯ ದೊರೆಯುತ್ತದೆ ಎಂಬುದು ನಂಬಿಕೆ.ಚಕ್ರದ ಮದ್ಯದ ಕಡ್ಡಿಗಳು(spokes)ಗಳಿಗೆ ಸಂಸ್ಕೃತದಲ್ಲಿ ನೇಮಿ ಅಂತ ಹೆಸರು.ಮೇಲಿನ ಎಲ್ಲಾ ಕಾರಣಕ್ಕೆ ನೈಮಿಶಾರಣ್ಯ ಎನ್ನುವ ಹೆಸರು ಬಂದಿದೆ. ಇಲ್ಲಿ ಚತುರ್ವರ್ಣದ ಎಲ್ಲಾ ಜನರು ನಮ್ಮ ಹಿರಿಯರ ಶ್ರದ್ಧಾ ಕರ್ಮ ಮಾಡುವ ವಾಡಿಕೆ ಇದೆ.

ವ್ಯಾಸಗದ್ಧಿ

ಇಲ್ಲಿ ವ್ಯಾಸಗದ್ಧಿ ಎನ್ನುವ ಸ್ಥಳವಿದೆ. ವಟ ವೃಕ್ಷದ ಕೆಳಗೆ ವ್ಯಾಸರು ಕುಳಿತು ನಾಲ್ಕು ವೇದಗಳನ್ನು ವಿಂಗಡಿಸುತ್ತಾರೆ,ಅಷ್ಟ ಪುರಾಣಗಳು, ಶುಕಾಚಾರ್ಯರು ಭಾಗವತವನ್ನು ಉಪದೇಶಿಸಿದ್ದು ಇಲ್ಲೇ. ನರ ನಾರಾಯಣರು ಒಂದಾಗಿರುವ ವೃಕ್ಷವನ್ನು ನೋಡಬಹುದು(ಪಟ ಲಗತ್ತಿಸಿ) ಇನ್ನೊಂದು ವಿಶೇಷ ಶತಾರೂಪದೇವಿ ವೈವತ್ಸತ ಮನುವಿನೊಂದಿಗೆ (ಸೂರ್ಯ ಪುತ್ರ)ಸೇರಿ ಮನು ಕುಲದ ಆರಂಭದದ್ದು ಇಲ್ಲೇ.

ದಧೀಚಿ ಕುಂಡ

ವೃತ್ರಾಸುರ (ಚಿತ್ರಕೇತು ಪಾರ್ವತಿ ಶಾಪದಿಂದ ಅಸುರನಾದದ್ದು) ಎಂಬ ಒಬ್ಬ ಮಹಾನ್ ತಪಸ್ವಿ ಇದ್ದ ಅವನನ್ನು ಕೊಲ್ಲಲು ಯಾವುದೇ ಆಯುಧಗಳಿಂದ ಸಾಧ್ಯವಿರಲಿಲ್ಲ.ಅದಕ್ಕಾಗಿ ದಧೀಚಿ ಎಂಬ ಮಹರ್ಷಿ ತನ್ನ ಬೆನ್ನು ಮೂಳೆಯನ್ನು ನೀಡಿ ವಿಶೇಷವಾದ ವಜ್ರಾಯುಧವನ್ನು ಮಾಡಿಕೊಳ್ಳಲು ತಿಳಿಸುತ್ತಾರೆ.  ಬೆನ್ನು ಮೂಳೆಗೆ ಅಘಾದ ಶಕ್ತಿ ತುಂಬಲು ಇಲ್ಲಿ ಎಲ್ಲಾ ನದಿಗಳ ನೀರು ಅಂದರೆ ತೀರ್ಥವನ್ನು ದೇವತೆಗಳು ತಂದು ಈ ಕುಂಡವನ್ನು ನಿರ್ಮಿಸುತ್ತಾರೆ. ಅದಕ್ಕಾಗಿಯೇ ಈ ಕುಂಡವನ್ನು ಮಿಶ್ರತೀರ್ಥ ಅಂತಲೂ ಕರೆಯುತ್ತಾರೆ. ಈ ಕುಂಡದಲ್ಲಿ ಸ್ನಾನ ಮಾಡಿದರೆ ಮೂಳೆಗಳು ವಜ್ರದಷ್ಟು ಗಟ್ಟಿಯಾಗುತ್ತದೆ ಎಂಬುದು ಪ್ರತೀತಿ.ಬ್ರಹ್ಮದೇವನ ಆದೇಶದ ಮೇರೆಗೆ ರಚಿತವಾದ ನಾರಾಯಣ ಕವಚವನ್ನು ಪಠಿಸಿದರೆ  ಈಗಲೂ ಮೂಳೆಗಳ ಸಮಸ್ಯೆ ಇರುವವರಿಗೆ ಉತ್ತಮ ಫಲ ಲಭ್ಯವಾಗುತ್ತದೆ.  ದಧೀಚಿ ಮಹರ್ಷಿಯ ಬೆನ್ನು ಮೂಳೆಯಿಂದ  ಮಾಡಿದ ವಜ್ರಾಯುಧದಿಂದ ವೃತ್ತಾಸುರನ ಸಂಹಾರವಾಗುತ್ತದೆ.

ಇದಿಷ್ಟೂ ನೈಮಿಷಾರಣ್ಯದ ವಿಶೇಷ.




*********************************************************************************

                                                                     ಅಯೋಧ್ಯಾ

ಒಂದು ದೊಡ್ಡ ಐತಿಹಾಸಿಕ ವಿಜಯ,ಅಯೋಧ್ಯೆಯಲ್ಲಿ ಬಾಲರಾಮನ ಸ್ಥಾಪನೆಯಾದ ಸ್ಥಳ ವೀಕ್ಷಣೆ ಮುಂದಿನ ದಿನದಲ್ಲಿ.  500 ವರ್ಷ ಕಾಲದ ಹೋರಾಟದ ನಂತರ ಸಿಕ್ಕ ಗೆಲುವು ಬಾಲ ರಾಮನನ್ನೂ ಮತ್ತೆ ಅವನದೇ ಹುಟ್ಟೂರಿನಲ್ಲಿ ಸ್ಥಾಪಿಸಿದ ರೋಮಾಂಚನದ ಘಳಿಗೆಯನ್ನು ನಾವೆಲ್ಲಾ ಸಾಕ್ಷಿಕರಿಸಿದ್ದೇವೆ ಎನ್ನುವುದೇ ಹೆಮ್ಮೆಯ ವಿಷಯ. ಪ್ರವಾಸದ ಮುಂದಿನ ತಾಣ ಅಯೋಧ್ಯಾ.

2024 ಜನವರಿ 22 ರಂದು ಒಂದು ಐತಿಹಾಸಿಕ ಗೆಲುವು ಕಂಡ ಕ್ಷಣ. ಹಿಂದೂರಾಷ್ಟ್ರದಲ್ಲಿ ನಮ್ಮ ಆರಾಧ್ಯ ದೇವ ಶ್ರೀರಾಮನ ಹುಟ್ಟಿದ ಸ್ಥಳವನ್ನು ಮತ್ತೆ ನಮ್ಮದೇ ನೆಲದಲ್ಲಿ ಹಿಂದೆ ಪಡೆಯಲು 500 ವರ್ಷಗಳ ದೀರ್ಘ ಹೋರಾಟ ಮಾಡಬೇಕಾಗಿದ್ದು ,ಹಲವು ಮಹನೀಯರ ಬಲಿದಾನವಾದದ್ದು ಒಂದು ದುರಂತ.  ನೈಮಿಷಾರಣ್ಯ ದಿಂದ ಅಯೋಧ್ಯಾ ಸುಮಾರು 220 km ಗಳ ಪ್ರಯಾಣ. ಮಾರ್ಗ ಮಧ್ಯೆ ಸರಯೂ ನದಿ ದಡದಲ್ಲಿ ರಾಮ ಲಕ್ಷ್ಮಣ ಭರತ ಶತ್ರುಘ್ನ ಸ್ನಾನದ ಘಟ್ಟವೆಂಬ ಸ್ಥಳಗಳನ್ನು ನೋಡಬಹುದಾಗಿದೆ.ಆಯೋದ್ಯೆ ತಲುಪುವ ಮುನ್ನ ನಂದಿಗ್ರಾಮ ಎನ್ನುವ ಒಂದು ಪುಟ್ಟ ಗ್ರಾಮ ಹಾದು ಹೋಗಬೇಕು ಇದು ಅಯೋದ್ಯೆಯಿಂದ 22 km ದೂರದಲ್ಲಿದೆ.

ನಂದಿಗ್ರಾಮ

ಇಲ್ಲಿ ಭರತ ಮತ್ತು ಹನುಮರ ಭೇಟಿಯಾದ ಸ್ಥಳವಿದೆ.  ಪಿತೃವಾಕ್ಯ ಪರಿಪಾಲಕ ರಾಮ ತನ್ನ ವನವಾಸಕ್ಕೆ ತೆರಳುವಾಗ ಸಹೋದರ ಭರತ ಬಹಳ ದುಃಖದಿಂದ ತಾನು ಅರಮನೆ ವಾಸ ತೊರೆದು ರಾಮನ ಪಾದುಕೆಗಳನ್ನು ಇಟ್ಟುಕೊಂಡು ನಂದಿಗ್ರಾಮದಿಂದಲ್ಲೇ ರಾಜ್ಯಭಾರ ಮಾಡುತ್ತಾ ರಾಮನ ಬರುವಿಕೆಗೆ ಕಾದು ಕುಳಿತಿದ್ದ.  ರಾಮ ಸೀತೆ ಲಕ್ಷ್ಮಣ 14 ವರ್ಷಗಳ ವನವಾಸ ಮುಗಿಸಿ ಬಾರದೇ ಹೋದರೆ ಅಗ್ನಿಪ್ರವೇಶ ಮಾಡುವುದಾಗಿ ಭರತ ತಿಳಿಸಿದ್ದನಂತೆ.  14 ವರುಷಗಳು ಮುಗಿದು ರಾವಣ ವಧೆಯಾಗಿ ಹಿಂದಿರುಗುವುದು ತಡವಾದಾಗ ಭರತ ಎಲ್ಲಿ ಅಗ್ನಿಗೆ ಆಹುತಿಯಾಗಿ ಬಿಡುತ್ತಾನೆಂದು ಶ್ರೀ ರಾಮ ಹನುಮನನ್ನು ವಾಯು ವೇಗದಲ್ಲಿ ನಂದಿ ಗ್ರಾಮಕ್ಕೆ ಹೋಗಿ "ರಾಮ ಬರುತ್ತಿದ್ದಾನೆ"ಎಂಬುದನ್ನು ತಿಳಿಸಲು ಹೇಳಿದನಂತೆ. '' ರಾಮ" ಎಂಬುದು ಮೊದಲ ಪದವಾಗಿರುವಂತೆ ನೋಡಿಕೊಳ್ಳಲುೂ ತಿಳಿಸಿದಂತೆ.  ಭಾತ್ರು ಪ್ರೇಮದ ಪರಮಾವಧಿ ಇದು ಅಲ್ಲವೇ? ಅದಕ್ಕಾಗಿಯೇ ಸಹೋದರ ಪ್ರೇಮಕ್ಕೆ ರಾಮ ಲಕ್ಷ್ಮಣ ಭಾರತರಿಗಿಂತ ಉತ್ತಮ ಉದಾಹರಣೆ ಯಾರು ಇರಲಾರರು.  ಇನ್ನೇನು ಅಗ್ನಿ ಕುಂಡಕ್ಕೆ ಹಾರಬೇಕು, ಹನುಮಂತನಿಂದ ರಾಮ ಎನ್ನುವ ಪದ ಕೇಳಿ ಹಾಗೆಯೇ ನಿಂತನಂತೆ ಭರತ.  ಪಾದುಕೆ ಮತ್ತು ರಾಮ ಸೀತಾ ಲಕ್ಷ್ಮಣ ಭರತರ ವಿಗ್ರಹ ಇಲ್ಲಿದೆ.  ಸಾಕ್ಷಿಯಾಗಿ ಇಲ್ಲೂ ಒಂದು ವಟ ವೃಕ್ಷ ದ್ವಾಪರ ಯುಗದಿಂದ ಬಿಳಲುಗಳ ಸಹಾಯದಿಂದ ಉಳಿದುಕೊಂಡಿದೆ.  ಇತಿಹಾಸ ತಜ್ಞರು ಕಾಲಗಟ್ಟವನ್ನು ದೃಢೀಕರಿಸಿದ್ದಾರೆ ಕೂಡ. ಇದಕ್ಕಿಂತ ಸಾಕ್ಷಿ ಬೇಕೆ. ತರ್ಕಕ್ಕೂ ನಿಲುಕುವಂತಹವು ಈ ಸ್ಥಳ ಮಹಾತ್ಮೆ.

ಅಯೋಧ್ಯೆಯಲ್ಲಿ ಬಿಲ್ಲಿನಾಕಾರದ ಪ್ರವೇಶದ್ವಾರ ಕಾಣಬಹುದಾಗಿದೆ. ಝಗಮಗಿಸುವ ದೀಪಳಿಂದ ಕಂಗೊಳಿಸುವ ರಸ್ತೆಗಳು.ನಮ್ಮ ಪ್ರಧಾನಿಗಳು ಅಭಿವೃದ್ಧಿಪಡಿಸಿರುವ ದ್ವಿಪಥ ಸಂಚಾರ ಯೋಗ್ಯ ಮಾರ್ಗಗಳು ರಾಮಲಲ್ಲನ ದರ್ಶನವನ್ನು ಒಂದು ಹಬ್ಬವಾಗಿಸುವಂತಿದೆ.  ಚೂಡಾಮಣಿ ಆಕಾರದ ವೃತ್ತ (ಪಟ ) ಮತ್ತು ಭಾರತದ ಗಾನ ಕೋಗಿಲೆ ಲತಾ ಮಂಗೇಶ್ರರ್ ನೆನಪಿಗಾಗಿ ವೀಣೆಯೊಂದರ ಮಾದರಿ ಇರುವ ವೃತ್ತ ಕಣ್ಮನ ಸೆಳೆಯುತ್ತದೆ.  ಶ್ರೀ ರಾಮ ಪ್ರಭು ದರ್ಶನಕ್ಕೆ ಮುಂಚೆ ಹನುಮನ ದರ್ಶನವನ್ನು ಮೂಲ ರಾಮ ಮಂದಿರದ 2 km ಅಂತರದಲ್ಲಿ ಕಾಣಬಹುದು. ಬೆಳಿಗ್ಗೆ ಸುಮಾರು 7 ಗಂಟೆಯಿಂದಲೇ ರಾಮನ ದರ್ಶನಕ್ಕೆ ಪ್ರವೇಶ ತೆರೆದಿರುತ್ತದೆ. ರಾತ್ರಿ 9 ರವರೆಗೆ ಇರುತ್ತದೆ.  ಮುಂಜಾನೆ ಬೇಗ ಹೋದಷ್ಟು ಹೆಚ್ಚಿನ ಜನಸಂದಣಿಯಿಲ್ಲದೆ ಒಂದು ಗಂಟೆ ಒಳಗೆ ದರುಶನ ಆಗುತ್ತದೆ. ಮದ್ಯೆ 12 ರಿಂದ 1 ಗಂಟೆಯವರೆಗೆ ದ್ವಾರ ಮುಚ್ಚೀರುತ್ತಾರೆ ಗಮನಿಸಿ.ಇಲ್ಲಿ ಮೂಲ ಪ್ರವೇಶದ್ವಾರದಿನದ 1.5 km ಅಷ್ಟು ಒಳಗೆ ಮತ್ತು 1 km ಪ್ರಕಾರವನ್ನು ಕಾಲ್ನಡಿಗೆಯಲ್ಲಿ ಹೋಗ ಬೇಕಿದೆ. ವೃದ್ಧರು ನಡೆಯಲಾಗದವರಿಗೆ ವಿಲ್ ಚೇರ್ಗಳು ಲಭ್ಯವಿದೆ.  ಜನಗಳ ಮದ್ಯೆ ವೇಗವಾಗಿ ನಡೆಯುವ ಅಭ್ಯಾಸ ಇರಬೇಕು. ಇನ್ನೊಂದು ಮುಖ್ಯ ಸಂಗತಿ ಎಂದರೆ ದರ್ಶನಕ್ಕೆ ಹೋಗುವಾಗ ಯಾವುದೇ ಮೊಬೈಲ್ ಎಲೆಕ್ಟ್ರಾನಿಕ್ ವಸ್ತು, ಪರ್ಸ್,ಬೆಲ್ಟ್ ಇತ್ಯದಿ ಯನ್ನೂ ಸಹ ಒಳ ಬಿಡುವುದಿಲ್ಲ.  ಲಾಕರ್ ವ್ಯವಸ್ಥೆ ಇದೆ,ಅದಕ್ಕೂ ಒಂದಷ್ಟು ಸಾಲಿನಲ್ಲಿ ನಿಂತು ಜಮೆ ಮಾಡಬೇಕು.ಸಮಯ ವ್ಯರ್ಥ ಆಗಬಾರದೆಂದರೆ ಎಲ್ಲವನ್ನೂ ನಾವು ತಂಗಿರುವ ಸ್ಥಳ ಆಥವ ನಮ್ಮದೇ ಸಾರಿಗೆ ವ್ಯವಸ್ಥೆ ಇದ್ದರೆ ಅಲ್ಲೇ ಬಿಟ್ಟು ಹೊರಡುವುದು ಉತ್ತಮ.ಕೇವಲ ಹಣ ಮಾತ್ರ ತೆಗೆದು ಕೊಂಡು ಹೋಗಬಹುದು. ಸುರಕ್ಷತೆ ದೃಷ್ಟಿಯಿಂದ ವ್ಯವಸ್ಥೆ ಒಪ್ಪ ಬೇಕಾದ್ದೆ.ಆದರೆ ಇಲ್ಲಿ ಒಂದು ಎಚ್ಚರಿಕೆ ಸಂದೇಶ ನೆನಪಿಟ್ಟು ಕೊಳ್ಳಿ ಮಿತ್ರರೇ.ಉಳಿದು ಕೊಂಡ ಹೋಟೆಲ್,ಸ್ಥಳದ ಗುರುತಿನ ಚೀಟಿ ನಿಮ್ಮ ಬಳಿ ಇರಲಿ.ಇಲ್ಲದೆ ಹೋದರೆ ಮೊಬೈಲ್ ಇಲ್ಲದೆ ಹುಡುಕುವುದೇ ಕಷ್ಟ. ಇಲ್ಲಿ ಎಲ್ಲಾ ರಸ್ತೆ ,ಗಲ್ಲಿಗಳು ಒಂದೇ ತೆರನಾಗಿ ಕಾಣುತ್ತದೆ.ಮತ್ತು ಭಾಗಶಃ ಹೋಟೆಲ್ ,ಅಂಗಡಿಗಳ ಹೆಸರು ಶ್ರೀ ರಾಮನ ಹೆಸರಲ್ಲೇ ಇದೆ. "ರಾಮ ರೆಸಿಡೆನ್ಸಿ,ರಾಮ ಹೋಟೆಲ್,ಮೋಟೆಲ್, ರಾಮ ಆಶ್ರಮ....ಹೀಗೆ ಬಹಳ ಗೊಂದಲ ಆಗುತ್ತದೆ.ರಸ್ತೆ ಗಲ್ಲಿಯ ಹೆಸರು ನೆನಪಿಟ್ಟು ಕೊಳ್ಳಬೇಕು.(ನಾವು ಆರು ಜನ ಬೇರೆ ಬೇರೆ ಯಾಗಿ ರಾತ್ರಿವೇಳೆಯಲ್ಲಿ ಬಹಳ ಆತಂಕಕ್ಕೆ ಗುರಿಯಾದೆವು.ಅಂತೂ 2 ಗಂಟೆಗಳ ಹರಸಾಹಸ ಮಾಡಿ ಒಟ್ಟು ಗೂಡಿದೆವು. ವಿಭಿನ್ನ ಕೆಟ್ಟ ಅನುಭವ😛) ಮತ್ತೆ ದರುಶನ ಕ್ಷಣಕ್ಕೆ ಹಿಂದಿರುಗುತ್ತೇನೆ.

ಐದು ಗೋಪುರಗಳನ್ನು ಒಳಗೊಂಡ ಮಂಟಪಗಳ ಹಾದು ಮುಖ್ಯ ಮಂಟಪಕ್ಕೆ ಸಾಕಷ್ಟು ಮೆಟ್ಟೆಲುಗಳ ಹತ್ತಿ ಹೋಗಬೇಕು. ಬಿಳಿಯ ಅಮೃತ ಶಿಲೆಯ ಹಾಸಿನ ನೆಲ,ಸುತ್ತಲೂ ಸುಂದರ ವೈವಿದ್ಯಮಯ ಕೆತ್ತನೆಯ ಗೋಡೆಗಳು ಬಂಗಾರದ ತೆಳು ಬಣ್ಣ ಹಳದಿ ಮಯವಾದ ದೇಗುಲ ಸೂರ್ಯನ ಪ್ರಥಮ ಕಿರಣದ ಆಹ್ಲದಕತೆಯ ಅನುಭವ ನೀಡುತ್ತದೆ. ತಲೆ ಎತ್ತಿ ನೋಡಿದರೆ ಸೂರಿನ ತುಂಬಾ ಸೊಗಸಾದ ಕೆತ್ತನೆ.ಭವ್ಯ ಅರಮನೆಯ ಕಂಡಂತೆ ಅನ್ನಿಸುತ್ತದೆ. ಸಾಲಿನಲ್ಲಿ (ನಾಲ್ಕೈದು ಸಮಾನಾಂತರ ಸಾಲುಗಳು ಇವೆ)ನಿಂತು ಸುರಕ್ಷತಾ ಸಿಬ್ಬಂದಿಗಳಿಂದ ತಳ್ಳಿಸಿಕೊಂಡ   ಒಳ ಬಂಧತೆ ಪ್ರಭುವಿನ ದಿವ್ಯ ಮೂರ್ತಿ,ಮಂದ ಹಾಸ ಬೀರುತ್ತಾ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಕಾಣುತ್ತದೆ.  ಮೈ ಮನವೆಲ್ಲ ರೋಮಾಂಚನ,,,!!!! ಪುಟ್ಟ ಮಗುವೊಂದು ತಪ್ಪಿಸಿಕೊಂಡು ಮತ್ತೆ ತಾಯಿಯ ಕಂಡಾಗ ಆಗುವ ಆನಂದ!!!

ಕಣ್ಣು ಗಳು ತುಂಬಿ ಆನಂದ ಭಾಷ್ಪ ಕೆನ್ನೆಗಳನ್ನು ನೆನೆಸಿತ್ತು. ಈ ಮದ್ಯೆ ಉತ್ಖನನದ ವೇಳೆ ಸಿಕ್ಕ ಪುಟ್ಟ ರಾಮನ ಮೂರ್ತಿ ರಾಮಲಲ್ಲಾನ ಮುಂದೆ ಸಾಲಂಕೃತ ವಾಗಿ ನಿಂತಿರುವುದನ್ನು ಮರೆಯದೆ ನೋಡಬೇಕು.ಅದೇ ಮೂಲ ರಾಮ ವಿಗ್ರಹ.ಈಗಲೂ ಪ್ರತಿನಿತ್ಯ ಪೂಜಿಸಲ್ಪಡುತ್ತಿದೆ.  ಸಾಲಿನಿಂದ ಹೊರ ಬಂದ ಮೇಲೂ ಮತ್ತೆ ಇನ್ನೊಂದು ಬಾರಿ ಜನಗಳ ಮದ್ಯೆ ನುಗ್ಗಿಯಾದರು ಹೋಗಿ ನೋಡಬೇಕೆಂಬ ಉತ್ಕಟ ಹಂಬಲ ಪ್ರತಿಯೊಬ್ಬರಿಗೂ ಹುಟ್ಟುತ್ತದೆ   ಹೀಗೆಯೇ ನಮ್ಮ ತಂಡದ ಸ್ತೋತ್ರ ಪಠನ ಕೇಳಿ ಅಲ್ಲಿಯ ಸಿಬ್ಬಂದಿಯೊಬ್ಬರು 15 ನಿಮಿಷಗಳ ಕಾಲ ನಿಲ್ಲಲುಅವಕಾಶ ನೀಡಿದ. ಅತ್ಯಂತ ಸಂತೋಷದಿಂದ ಪದೇ ಪದೇ ಪ್ರಭು ರಾಮನ ಕಣ್ತುಂಬಿಕೊಂಡು ಹೊರ ಬಂದೆವು. ಕಣ್ಣಿನ ಕ್ಯಾಮರಾದಲ್ಲಿ ಶಾಶ್ವತ ಸೆರೆಯಾದ ನಮ್ಮ ಬಾಲ ರಾಮ.  ಹೊರಗೆ ಬರುವಷ್ಟರಲ್ಲಿ ಬೆವರಿ ನೀರಾಗಿ ಹೋದೆವು. ಮನಸ್ಸು ಮಾತ್ರ ಪ್ರಪುಲ್ಲವಾಗಿ ಜನ್ಮ ಸಾರ್ಥಕವಾದ ಅನುಭೂತಿ ಕೊಟ್ಟಿತು. ಇದಕ್ಕೆಲ್ಲಾ ಕಾರಣವಾದ ಮಹನೀಯರ ಪಾದರವಿಂದಗಳಿಗೆ ಶಿರಸಾ ವಂದನೆಗಳನ್ನು ಸಲ್ಲಿಸಿದೆವು.

ನಮ್ಮ ಜೀವನ ಕಾಲದಲ್ಲಿ ಕನಿಷ್ಠ ಒಮ್ಮೆಯಾದರೂ ಅಯ್ಯೋದ್ಯ ರಾಮನ ನೋಡಲೇ ಬೇಕು.

ರಾಮನ ಜನ್ಮ ಭೂಮಿ ನೋಡಿದೆವು ಮುಂದೆ ದಶರಥ ಮಹಲ್ ಎಂಬ ಅರಮನೆ ಇದೆ.ಇಲ್ಲಿ ಕೌಸಲ್ಯ,ಸುಮಿತ್ರಾ,ಕೈಕೇಯಿ ಕೋಣೆಗಳು ಅಡುಗೆ ಮನೆ, ರಾಮ ಲಕ್ಷ್ಮಣರು ಆಟವಾಡುತ್ತಿದ್ದ ಕೋಣೆಗಳು ಮೇಲೆ ಬರೆದಿದ್ದಾರೆ ಸಹ ಕಾಣಬಹುದು. ಜೀರ್ಣೋದ್ಧಾರದ ಪ್ರಕ್ರಿಯೆ ನಡೆಯುತ್ತಿದೆ.ರಾಮಸೀತೆಯ ಕಲ್ಯಾಣವಾದಾಗ ಸೀತೆಯನ್ನು ಮನೆ ತುಂಬಿಸಿಕೊಂಡ ಸ್ಥಳ ಕನಕ ಮಹಲ್ ಸಹ ಇದೆ. ಇಲ್ಲಿಯೂ ಸಹ ಸರಯೂ ನದಿಯಲ್ಲಿ ಮಿಂದು ಶ್ರದ್ಧಾ ಕಾರ್ಯಗಳನ್ನು ಮಾಡಬಹುದಾಗಿದೆ.







*********************************************************************************

                                       ಪ್ರಯಾಗ

ಅಯೋಧ್ಯೆಯಿಂದ ಪ್ರಯಾಗ್ ಸುಮಾರು 170 km ದೂರದಲ್ಲಿದೆ.  ಗಂಗಾ,ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವೇ ಈ ಸ್ಥಳದ ವಿಶೇಷ. ಹೆಚ್ಚೇನೂ ಪ್ರೇಕ್ಷಣೀಯ ಸ್ಥಳವಲ್ಲಾ.  ಮೂರು ನದಿಯ ಸೇರುವ ಜಾಗಕ್ಕೆ ದೋಣಿ ಯಲ್ಲಿ ಕರೆದು ಕೊಂಡು ಹೋಗುತ್ತಾರೆ. ತೀರ್ಥಸ್ನಾನ ಪುಣ್ಯದಾಯಕ ಎನ್ನುವ ನಂಬಿಕೆ.  ದೋಣಿಯಲ್ಲಿ ಹೋಗುವಾಗ ತಿಳಿಹಸಿರು ಬಣ್ಣದ ಗಂಗೆ ಮತ್ತು ಮಣ್ಣಿನ ಬಣ್ಣದ ಯಮುನಾ ಹರಿದು ಸೇರುವುದನ್ನು ಬಹಳವೇ ಸ್ಪಷ್ಟವಾಗಿ ಕಾಣಬಹುದು.ಇಲ್ಲಿಯೂ ಸರಸ್ವತಿ ಗುಪ್ತಗಾಮಿನಿಯಾಗಿ ಹರಿದು ಬರುತ್ತಾಳೆ.  ಸರಸ್ವತಿ ನದಿಯ ಹರಿವು ಏಕೆ ಗುಪ್ತ ಎನ್ನುವುದಕ್ಕೆ ಒಂದು ಕಥೆ ಇದೆ.  ಬದರೀ ಕ್ಷೇತ್ರದಲ್ಲಿ ಮಾನ ಎಂಬ ಸ್ಥಳದಲ್ಲಿ ವ್ಯಾಸರು ಗಣಪತಿಗೆ ಮಹಾಭಾರತವನ್ನು ಹೇಳಿ ಬರೆಸುವಾಗ ಸರಸ್ವತಿ ನದಿ ಜೋರಾಗಿ ಸದ್ದು ಮಾಡುತ್ತಾ ಹರಿಯುತ್ತಿದ್ದಳು. ಆ ಶಬ್ದಕ್ಕೆ ವ್ಯಾಸರು ಹೇಳುವುದು ಗಣಪತಿಗೆ ಕೇಳದೆ ಹೋಗುತ್ತದೆ. ಆಗ ವ್ಯಾಸರು ಸರಸ್ವತಿ ನದಿಗೆ "ನಿನ್ನ ಹರಿವು ನಿಶಬ್ದವಾಗಿರಲಿ" ಅಂತ ಆದೇಶಿಸಿದರು. ಅಲ್ಲಿ ಒಂದು ಕಡೆ ನೆಲದಲ್ಲಿ ಇದ್ದಕ್ಕಿದಂತೆ ಅದೃಷ್ಯವಾಗಿ ಹೋಗುತ್ತದೆ ಸರಸ್ವತಿ ನದಿ.ಮುಂದೆ ಪ್ರಯಾಗದಲ್ಲಿ ಗುಪ್ತಗಾಮಿನಿಯಾಗಿ ಮತ್ತೆ ಕಾಣಿಸಿಕೊಳ್ಳುತ್ತಾಳೆ.

     ಇಲ್ಲಿ ವೇಣಿದಾನ ಹಿಂದೂಗಳಲ್ಲಿ ಸಂಪ್ರದಾಯವಾಗಿ ನಡೆದು ಬಂದಿದೆ. ಪುರೋಹಿತರ ಮುಖೇನ ಸಂಕಲ್ಪ ಮಾಡಿ ಮೂರು ಹಿಡಿ ಅಥವಾ ಮೂರು ಇಂಚು ಕೂದಲು ಮುತ್ತೈದೆ ಸ್ತ್ರೀಯರು ತಮ್ಮ ಪತಿಯಿಂದ ಕತ್ತರಿಸಿ ಒಂದು ಮರದ ಬಾಗಿನದ ಸಮೇತ ಈ ಸಂಗಮ ಸ್ಥಳದಲ್ಲಿ ಬಂದು ನೀರಿಗೆ ಬಿಡುತ್ತಾರೆ.  ಸ್ತ್ರೀಯರಿಗೆ ಅವರ ಪಾಪಗಳೆಲ್ಲವೂ ಕೇಶದ ತುದಿಯಲ್ಲಿ  ಸಂಗ್ರಹವಾಗಿರುತ್ತದೆ ಎನ್ನುವ ನಂಬಿಕೆ ಅದಕ್ಕಾಗಿ ಇಲ್ಲಿ ಪಾಪ ವಿಮೋಚನೆಗೆ ವೇಣಿ ದಾನ ಮಾಡುವ ಪದ್ಧತಿ ಇದೆ

ಅಲ್ಲಿಂದ 120 km ಅಂತರದಲ್ಲಿ ಕಾಶಿ.


*********************************************************************************

                                            ಕಾಶಿ

ಕಾಶಿ ವಿಶ್ವನಾಥನ ದರುಶನಕ್ಕೂ ಸಾಲಿನಲ್ಲಿ ನಿಂತು ಕನಿಷ್ಠ 2 ಗಂಟೆಗಳ ಕಾಯುವಿಕೆ ಇರುತ್ತದೆ.ಸರ್ಕಾರಿ ಟಿಕೆಟ್ ವಿಶೇಷ ದರ್ಶನಕ್ಕೆ 300 ಆದರೆ,ಅಲ್ಲಿನ ಮಧ್ಯವರ್ತಿಗಳು ಲಿಂಗ ಸ್ಪರ್ಶ ಮಾಡಿಸುವುದಾಗಿ ಸುಳ್ಳೇ ಹೇಳಿ ತಲಾ 1000 ಹೆಚ್ಚುವರಿ ಕೇಳುತ್ತಾರೆ.  ಕಾಶಿ ವಿಶ್ವನಾಥ ಲಿಂಗದ ಸುತ್ತಾ ಕಬ್ಬಿಣದ ಕಂಬಿಗಳುಹಾಕಿ ಹಾಲನ್ನು ಲಿಂಗದ ಮೇಲೆ ಬೀಳುವಂತೆ ಕಾಲುವೆ ಯಾಕಾರದ ಕೊಳವೆಗಳನ್ನು ಇಟ್ಟಿದ್ದಾರೆ. ಅಲ್ಲಿಂದಲೇ ಲಿಂಗದ ಮೇಲೆಬೀಳುವಂತೆ ಹಾಲನ್ನು ಮತ್ತು ಇತರೆ ಹೂ ಗಳನ್ನು ಹಾಕಬೇಕು ಪ್ರಸಾದ ಅರ್ಚಕರೆ ದೂರದಿಂದ ತೋರಿಸಿ ನೀಡುತ್ತಾರೆ.  ಲಿಂಗ ಸ್ಪರ್ಶ ಸಾದ್ಯವೇ ಇಲ್ಲ ಈಗ.(ಹಿಂದೆ ಇತ್ತಂತೆ)  ಮಧ್ಯವರ್ತಿಗಳಿಂದ ಮೋಸಹೋದೀರಿ ಹುಷಾರು.  ಪ್ರಸ್ತುತ, ಕಾಶಿ ಕಾರಿಡಾರ್ ಸ್ವಚ್ಚವಾಗಿದೆ.ಆದರೆ ಅದರಿಂದ ಒಂದು ಅರ್ಧ km ಸುತ್ತಳತೆಯಲ್ಲಿ ಬಹಳವೇ ಸ್ವಚ್ಛತೆ ಇರದ ಗಲ್ಲಿಗಳು. ನಿಜಕ್ಕೂ ವಿಶ್ವ ವಿಖ್ಯಾತ ಪವಿತ್ರ ಸ್ಥಳವನ್ನು ಕೊಳಕಾಗಿ , ನಿರ್ವಹಣೆ ಇಲ್ಲದೆ ಇರುವುದು ಕಂಡರೆ ಬೇಸರವಾಗುತ್ತದೆ.  ಪಾರ್ವತಿ ದೇವಿಯ ಕಿವಿಯ ಓಲೆ ಬಿದ್ದ ಜಾಗದಲ್ಲಿ ವಿಶಾಲಾಕ್ಷಿ ಮಾತೆಯ ದೇಗುಲವಿದೆ.

ಶಿವನ ಅಂಗ ರಕ್ಷಕನಾದ ಕಾಲ ಬೈರೇಶ್ವರ ದೇವಸ್ಥಾನ ನೋಡಲೇ ಬೇಕಾದ ಸ್ಥಳ. ಕಾಶಿ ವಿಶ್ವನಾಥನ ನೋಡಿ ಬಂದಿದ್ದನ್ನು ಇಲ್ಲಿ ಬೈರೇಶ್ವರನಿಗೆ ಒಪ್ಪಿಸಬೇಕಂತೆ ಆಗಲೇ ದರುಶನ ಪುಣ್ಯ ಲಭ್ಯವಾಗುತ್ತದೆ ಎನ್ನುವ ಮಾತಿದೆ.  ಇಲ್ಲಿ ದೃಷ್ಟಿ ಗೊಂಬೆಗಳು ಮನೆಗಳಲ್ಲಿ ತೂಗಿಹಾಕಲು ಲಭ್ಯವಿದೆ. ಕಾಲ ಬೈರೇಶ್ವರ ಕೆಟ್ಟ ದೃಷ್ಟಿಯನ್ನೆಲ್ಲಾ ನುಂಗಿ ಮನೆಯನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ ಎನ್ನುವುದು ಜನರ ನಂಬಿಕೆ.  ಶಿವ ಪಾರ್ವತಿಯರ ಪುತ್ರ ಷಣ್ಮುಗನ ಜನನ ಹಾಗು ತಾರಕಾಸುರದ ವಧೆ ಆದದ್ದು ಈ ಕ್ಷೇತ್ರದಲ್ಲಿ ಎಂಬುದಾಗಿ ತಿಳಿದು ಬಂದಿತು.

ಗಂಗಾ ನದಿಯ ತಟದಲ್ಲಿರುವ ಕಾಶಿ ಕ್ಷೇತ್ರದಲ್ಲಿ ಪ್ರತಿದಿನ ರಾತ್ರಿ 7 ಗಂಟೆಗೆ ಸರಿಯಾಗಿ(ಹರಿದ್ವಾರದಲ್ಲಿಯೂ ಇದೆ ರೀತಿಯ) ಗಂಗಾರತಿ ಮಾಡುವ ಪದ್ಧತಿ ಇದೆ.  ಸಾವಿರಾರು ಮಂದಿ ಕಿಕ್ಕಿರಿದು ನೋಡಲು ಕಾತುರದಿಂದ ನಿಲ್ಲುತ್ತಾರೆ.  ಗಂಗಾ ನದಿಯ ತೀರದುದ್ದಕ್ಕೂ 84 ಘಾಟ್ ಗಳು (ಸ್ನಾನ ಘಟ್ಟ) ಇವೆ.ಇದರಲ್ಲಿ ದಶಾಹರಘಟ್ ನಲ್ಲಿ ಗಾಂಗಾರತಿ ನಡೆಯುತ್ತದೆ.  ನಮೋ ಘಾಟ್ ಎಂಬುದು ಒಂದು ಸ್ನಾನ ಘಟ್ಟ ಇಲ್ಲಿಂದ ಬೋಟ್ ನಲ್ಲಿ ಕುಳಿತು ನೋಡಲು ಹೋದೆವು.  ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕ ಘಾಟ್ ಳಲ್ಲಿ ಮೃತರ ಹೆಣ ಸುಡುವ ಅವಾಶವಿದೆ.ಉರಿಯುವ ಬೆಂಕಿಯ ನೋಡುತ್ತಾ ಈ ಬದುಕು ಅದೆಷ್ಟು ನಶ್ವರ ಎನ್ನಿಸದೇ ಇರದು.  ಅರೆಕ್ಷಣ ಕಣ್ಣುಗಳು ತುಂಬಿ ಬಂತು.ಇಲ್ಲಿ ಕರ್ನಾಟಕ ಭವನ ವಿದೆ. ವೃದ್ಧರು ಅನಾಥರನ್ನು ಇಲ್ಲಿ ತಂದು ಬಿಟ್ಟು ಹೋಗುತ್ತಾರೆ ಅಥವಾ ಒಂದಷ್ಟು ನಿರ್ಧಿಷ್ಟ ಹಣ ಕೊಟ್ಟು ಅಂತ್ಯ ಕ್ರಿಯೆ ಮಾಡಲೂ ಇಲ್ಲಿಯವರೆಗೆ ತಿಳಿಸುತ್ತಾರಂತೆ. ವಾರಸುದಾರರಿಲ್ಲದವರಿಗೆ ಅಂತ್ಯಸಂಸ್ಕಾರ ಇಲ್ಲೇ.  ಇಲ್ಲಿ ಬದುಕು ಅಂತ್ಯವಾದರೆ ಕೊನೇ ಘಳಿಗೆ ಯಲ್ಲಿ ರುದ್ರದೇವರು ಕಿವಿಯಲ್ಲಿ ರಾಮ ತಾರಕ ಮಂತ್ರ ಹೇಳುತ್ತಾರೆ ಎಂಬುದು ಸಹ ಒಂದು ನಂಬಿಕೆ

ಕಾಶಿ ಬಿಡುವ ಮುನ್ನ ಬಿಂದು ಮಾಧವನನ್ನು ನೋಡಿ ಬರಬೇಕು.

ಅಲ್ಲಿಂದ ಸಾರನಾಥ್ ಕಡೆ ಪಯಣ. ಬುದ್ಧಿಸಂ ಸಹ ಭಾರತದಲ್ಲಿ ಹುಟ್ಟಿದ ಒಂದು ಧರ್ಮ. ಆದರೆ ಬೆಳವಣಿಗೆಗೆ ಸಾಧ್ಯವಾಗದೆ ವಿದೇಶಗಳಲ್ಲಿ ಹರಡಿಕೊಂಡು ಬೆಳೆಯುತ್ತಾ ಬಂತು ಬುದ್ಧ ಹುಟ್ಟಿದ್ದು ಲುಂಬಿನಿ ನಗರದಲ್ಲಿ ಜ್ಞಾನೋದಯ ಬೌದ್ಧಗಾಯದಲ್ಲಿ, ಸಾರನಾತದಲ್ಲಿ ಶಿಷ್ಯರಿಗೆ ದೀಕ್ಷೆ ನೀಡಿದ್ದರು.  ಬುದ್ಧನು ತನ್ನ ನಾಲ್ಕು ಶಿಷ್ಯರಿಗೆ ಬೌದ್ಧ ಸಿದ್ಧಾಂತ ಭೋದನೆ ಮತ್ತು ದೀಕ್ಷೆ ನೀಡಿದ ಸ್ಥಳ ವಿದೆ ಮತ್ತು ಇಲ್ಲಿನ ಭೋಧಿ ವೃಕ್ಷ ಅಶೋಕನ ಮಕ್ಕಳು ಶ್ರೀಲಂಕದಿಂದ ತಂದು ನೆಟ್ಟದ್ದು ಎಂದು ತಿಳಿದುಬಂತು.  ತೈವಾನ್ ರಾಜ ನೀಡಿದ ದೊಡ್ಡ ಗಂಟೆ ಇದೆ ಒಮ್ಮೆ ಸದ್ದು ಮಾಡಿದರೆ ಸುಮಾರು 3,5km ದೂರದ ವರೆಗೆ ಗಂಟೆಯ ಶಬ್ಧ ಕೇಳುತ್ತದೆ. 2300ಹಿಂದಿನ ಸ್ತೂಪ ಇಲ್ಲಿದೆ. ಬುದ್ದನ ಅಸ್ತಿ ಇಲ್ಲಿ ಒಳಗೆ ಇಡಲಾಗಿದೆಯಂತೆ.  ವಿಶ್ವವಿಖ್ಯಾತ ಬೆನರಸ್ ವಿಶ್ವ ವಿದ್ಯಾಲಯ, ಮತ್ತು ಸಂಕಟ ವಿಮೋಚನಾ ಹನುಮಾನ್ ದೇಗುಲ ನೋಡಲೇ ಬೇಕಾದ ಸ್ಥಳಗಳು.





*********************************************************************************

                                                   ಗಯ

ಇದು ಬಿಹಾರ್ ರಾಜ್ಯದಲ್ಲಿದೆ.  ಗಯ ಮತ್ತು ಬೌದ್ಧ ಗಯ ಎರಡು ಧಾರ್ಮಿಕ ಕೇಂದ್ರಗಳು ಆದರೆ ಎರಡೂ ಬಿನ್ನ ಧರ್ಮಕ್ಕೆ ಸೇರಿದ್ದು.  ವಿಷ್ಣು ಗಾಯಾಸುರನನ್ನು ಕೊಂದ ಮತ್ತು ಅವನ ಪಾದವನ್ನು ಭೂಮಿಯ ಮೇಲೆ ಊರಿದ ಸ್ಥಳ ಇಲ್ಲಿದೆ ಅದನ್ನು 18 ನೇ ಶತಮಾನದಲ್ಲಿ ಇಂದೂರಿನ ರಾಣಿ ಅಹಲ್ಯಾಭಾಯಿ ನವೀಕರಿಸಿದಳು.  ಫಲ್ಗುಣಿ ನದಿ ತೀರದಲ್ಲಿರುವ ಈ ಕ್ಷೇತ್ರದಲ್ಲಿ ಹಿರಿಯರ ಶ್ರದ್ಧಾ ಕಾರ್ಯವನ್ನು ಶ್ರೀರಾಮನೇ ಮಾಡಿದನು ಎಂಬುದು ತಿಳಿದುಬರುತ್ತದೆ.ಅದಕ್ಕಾಗಿಯೇ ಎಲ್ಲಾ ವರ್ಣಿಯರು ಇಲ್ಲಿ ಬಂದು ಹಿರಿಯರ ಕಾರ್ಯ ಮಾಡುತ್ತಾರೆ.  ಸಂಜೆ ಈ ವಿಷ್ಣು ಪಾದಕ್ಕೆ ಗಂಧ ಮತ್ತು ಕುಂಕುಮದಿಂದ ಅಲಂಕಾರ ಮಾಡುತ್ತಾರೆ.  ಪಾದದ ಮಾದರಿ ಅಚ್ಚನ್ನು ಶುಭ್ರ ಬಿಳಿಯ ಬಟ್ಟೆಯ ಮೇಲೆ ಒತ್ತಿ ಕೊಡುತ್ತಾರೆ.(150/-,) ಅದನ್ನು ಮನೆಯಲ್ಲಿಟ್ಟು ಪೂಜೆ ಮಾಡಬಹುದಾಗಿದೆ.  

ಇಲ್ಲಿಂದ 15 km ಅಂತರದಲ್ಲಿ ಬೌದ್ಧ ಗಯ ಇದೆ. ಮಹಾಬೋಧಿ ದೇವಾಲಯ ಮತ್ತು ವಟ ವೃಕ್ಷ.  ಮೌರ್ಯ ವಂಶದ ಅಶೋಕನಿಂದ ನಿರ್ಮಿತವಾದ ಅಶೋಕ ಸ್ಥಂಭ ಸ್ತೂಪಗಳು, ಅದ್ಭುತ ಬುದ್ದನ ಮೂರ್ತಿಗಳು ಸುಂದರ ಶಿಲ್ಪ ಕಲೆಗಳನ್ನೂ ನೋಡಬಹುದು.  ಆದರೆ ಮೊಗಲ್ ಕಾಲದಲ್ಲಿ ಮಹಮದ್ ಗಜ್ನಿಯಿಂದ ದಾಳಿಗೆ ಒಳಪಟ್ಟು ಹಲವು ಕೆತ್ತನೆಗಳು ಹಾಳಾಗಿವೆ.  ಇದು ಬೇಸರದ ಸಂಗತಿ.  ಬುದ್ಧನಿಗೆ ಜ್ಞಾನೋದಯ ಆದ ಸ್ಥಳ. ಮುಖ್ಯ ದೇಗುಲದ ಮೇಲೇರುವ ದೇಗುಲದ ತುದಿಯಲ್ಲಿ 289 ಕೆಜಿಯ ಚಿನ್ನದ ಗೋಪುರವಿದೆ. ಅಶೋಕನ ನಂತರ ಸಮುದ್ರ ಗುಪ್ತ ಹೌದಾ ಧರ್ಮವನ್ನು ಭಾರತದಲ್ಲಿ ಹೆಚ್ಚು ಪ್ರಚಾರಪಡಿಸಿದ.  ಬೌದ್ಧ ಧರ್ಮ ವೇಗವಾಗಿ ಹಿಂದೂ ಧರ್ಮವನ್ನು ಹಿಂದಿಕ್ಕಿ ಬೆಳೆಯುತ್ತಿದ್ದ ಕಾಲದಲ್ಲಿ ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದ ಉಳಿವಿಗಾಗಿ ಬಹಳಷ್ಟು ಶ್ರಮ ವಹಿಸಿದರು  ಅದರ ಪರಿಣಾಮವೇ ಭಾರತ ಇಂದೂ ಹಿಂದೂಗಳ ರಾಷ್ಟ್ರವಾಗಿ ಉಳಿಯಲು ಸಾಧ್ಯವಾಯಿತು.




ಪ್ರವಾಸದ ಮಾಹಿತಿ ಇಷ್ಟವಾಯಿತು ಅಂತ ತಿಳಿದಿದ್ದೇನೆ.

ಸರ್ವೇ ಜನೋ ಸುಖಿನೋ ಭವಂತು. ಶುಭವಾಗಲಿ.

No comments:

Post a Comment