ಇದು ನನ್ನೊಡನೆ ವ್ಯವಹಿಸುವರ ಜಿಜ್ಞಾಸೆ. ಎಲ್ಲ ಸಾಮಾಜಿಕ ತಾಣಗಳಲ್ಲಿ, ನಾನು ಕನ್ನಡದಲ್ಲಿ ಬರೆಯುತ್ತೇನೆ. ಫೇಸ್ಬುಕ್, ವಾಟ್ಸಾಪ್ ಎಲ್ಲಾ ಕಡೆ ಬರೆಯುತ್ತೇನೆ. ಖಂಡಿತ ನಾನೊಬ್ಬ ಕನ್ನಡ ಪಂಡಿತ ಅಲ್ಲ . ಬರೆದು, ಬರೆದು ಅಭ್ಯಾಸವಾಗಿದೆ. ನಾನು ವೃತ್ತಿಯ ಕಾರಣ ಪ್ರಪಂಚದ ಬಹುತೇಕ ಎಲ್ಲ ಕಡೆ ವ್ಯವಹರಿಸುವ ಅನಿವಾರ್ಯತೆ ಇತ್ತು.. ಇಂಗ್ಲಿಷ್ ಚೆನ್ನಾಗಿ ಬಲ್ಲೆ. ಕನ್ನಡಾಭಿಮಾನ ಹೆಚ್ಚಿದೆ. ಇಂಗ್ಲಿಷ್ ನಲ್ಲಿ ಬರೆದದ್ದು ಈ ಬ್ಲಾಗ್ ನಲ್ಲಿ ಇದೆ. ನನ್ನ ಮೊದಲ ಆದ್ಯತೆ, ಕನ್ನಡ ಕಾರಣ ಹೀಗಿದೆ.
ಇದು 1992 ರಲ್ಲಿ ನಡೆದ್ದದ್ದು. CMC ಎಂಬ ಸಾರ್ವಜನಿಕ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದ್ದೆ. ಅಲ್ಲಿ ತರಭೇತಿಗಾಗಿ ಅಂದಿನ ಮದ್ರಾಸು (ಇಂದಿನ ಚೆನ್ನೈ ) ಗೆ ಹೋಗಿದ್ದೆ. ನಮ್ಮ ತಂಗುದಾಣ ಕೀಲ್ಪಾಕ್ ಹುಚ್ಚಾಸ್ಪತ್ರೆಗೆ ಹತ್ತಿರ ಇತ್ತು. 😉😁😁 ಕಛೇರಿ ಅಣ್ಣಾ ಸಾಲೆ ಯಲ್ಲಿ ಇತ್ತು. ನಾವು ಹೊರಗಿರುವ ಕಾರಣ ದಿನ ಭತ್ಯೆ ನೀಡುತ್ತಿದ್ದರು. ಅದರಲ್ಲಿ ಹಣ ಉಳಿಸುವುದಕ್ಕೆ, ಟ್ಯಾಕ್ಸಿ, ಆಟೋ ಬಿಟ್ಟು, ಸಾರ್ವಜನಿಕ ಬಸ್ ನಲ್ಲಿ ಹೋಗುತ್ತಿದ್ದೆವು. ಬಸ್ ಮೇಲೆ ತಮಿಳಿನಲ್ಲಿ ಮಾತ್ರ ಬರೆದಿರುತಿದ್ದರು. ಎಲ್ಲ ವ್ಯವಹಾರ ತಮಿಳು ನಲ್ಲಿಯೇ ! ನಾನು ತಮಿಳು ಲಿಪಿ ಕಲಿಯಬೇಕಾಯಿತು. ಕಚೇರಿಯಲ್ಲಿ ಕೂಡ, ಸಾಕಷ್ಟು ಸೀನಿಯರ್ಸ್ ಅವರವರಲ್ಲಿ ತಮಿಳುನಲ್ಲಿಯೇ ವ್ಯವಹರಿಸುತಿದ್ದರು. ಅಲ್ಲಿ ವೃತ್ತ ಪತ್ರಿಕೆಗಳು ವಾರ/ ಮಾಸ ಪತ್ರಿಕೆಗಳು ತಮಿಳು ಭಾಷೆಯಲ್ಲಿ. ಅವರ ಭಾಷಾಭಿಮಾನ ದೊಡ್ಡದು. ನಾಡಿನ ಬಗ್ಗೆ ಅವರಿಗೆ ಹೆಮ್ಮೆ ಇದೆ. ಒಂದು ವರ್ಷಕ್ಕೂ ಹೆಚ್ಚು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ನನಗೆ, ವ್ಯತ್ಯಾಸ ದೃಗ್ಗೋಚರ ಆಯಿತು.
ಇನ್ನೊಂದು ಅನುಭವ, ಕಾಂಪ್ಯಾಕ್ ಎನ್ನುವ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತಿದ್ದೆ. 2002 ರಲ್ಲಿ ತರಬೇತಿಗಾಗಿ, ದಕ್ಷಿಣ ಕೊರಿಯಾದ ಸಿಯೋಲ್ ಗೆ ಹೋಗಿದ್ದೆ. ನಮ್ಮ ಮಾರ್ಗದರ್ಶಕ ಆಸ್ಟ್ರೇಲಿಯಾ ದೇಶದವನು. ಇಬ್ಬರು ಸ್ಥಳೀಯರು ಮತ್ತೋರ್ವ ಇಂಡೋನೇಷ್ಯಾದಿಂದ ಬಂದಿದ್ದ. ನಾವು ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್ ನಲ್ಲಿ ಗ್ಲೋಬಲ್ ಸರ್ವರ್ಸ್ ಇನ್ಸ್ಟಾಲ್ ಮಾಡುವ ಮೂಲಕ ಕಲಿಯ ಬೇಕಿತ್ತು. ವೃತ್ತಿಯ ಬಗ್ಗೆ ಹೆಚ್ಚು ಬೇಡ. ಅಲ್ಲಿ ಎಲ್ಲಾರೂ ಕೊರಿಯನ್ ಮಾತಾಡುತಿದ್ದರು. ಇಂಗ್ಲಿಷ್ ಬರುವುದೇ ಇಲ್ಲ. ಸಾಮಾನ್ಯ ವ್ಯವಹಾರ ತುಂಬಾ ಕಷ್ಟ. ಲಿಫ್ಟ್ ಗಳಲ್ಲಿ ಮೆಟ್ರೋ ಗಳಲ್ಲಿ ಅವರ ಭಾಷೆಯಲ್ಲಿಯೇ ನಿರ್ದೇಶನ ನೀಡುತಿದ್ದರು. ಆದರೆ ಜನ ಒಳ್ಳೆಯವರು. ನನ್ನ ಗಾಜಿನ ಕನ್ನಡಕ ಒಡೆದು ಹೋಯ್ತು. ತುಂಬಾ ಕಷ್ಟ ನನಗೆ. ಕಣ್ಣು ಪರೀಕ್ಷೆ ಮಾಡಲು ಹೋದರೆ, ಲಿಪಿ ಕೂಡಾ ಅವರದ್ದೇ ಭಾಷೆ. ಮನೆಯಿಂದ ಕನ್ನಡಕದ ಸಂಖ್ಯೆ ತರಿಸಿ.. ಮಾಡಿಸಿಕೊಳಬೇಕಿತ್ತು.. ತಕ್ಷಣ ಮಾಡಿಕೊಟ್ಟರು. ಇಲ್ಲಿ ಅರಿತ ವಿಷಯ, ಭಾಷಾಭಿಮಾನ ಇದ್ದರೂ, ಬೇರೆಯವರಿಗೆ ಸಹಾಯ ಮಾಡುವ ಅವರ ಮನೋಧರ್ಮ.
ಈ ಎರಡೂ ಅನುಭವಗಳು ನನ್ನ ಸಂಕಲ್ಪ ದೃಢ ಮಾಡಿದೆ. ಆದಷ್ಟೂ ಕನ್ನಡದಲ್ಲಿಯೇ ವ್ಯವಹಾರ. ನಾವು ಕನ್ನಡ ಬಿಟ್ಟರೆ, ಇಂಗ್ಲೆಂಡ್ ನಲ್ಲಿ ಮಾತಾಡುತ್ತಾರ ?! ಸಂಖ್ಯೆ ಮರೆತಿದ್ದೇವೆ. ನಿಮ್ಮ ಮೊಬೈಲ್ ಸಂಖ್ಯೆ ಕನ್ನಡದಲ್ಲಿ ಹೇಳಿ ನೋಡುವ !! ತರಕಾರಿ, ಹಣ್ಣುಗಳನ್ನು ಕನ್ನಡದಲ್ಲಿಯೇ ಹೇಳೋಣ. ಹತ್ತಾರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಇದ್ದರೂ ಕನ್ನಡ ಕಲಿಯುವ ಪ್ರಮೇಯ ಬರುವುದಿಲ್ಲ. ಕಲಿಸೋಣ. ನಾವು ಅವರ ಭಾಷೆ ಮಾತಾಡುವ ಅಗತ್ಯ ಇಲ್ಲ
ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗಲ್ಲಿ ಗಲ್ಲಿಗೆ... ಏನಂತೀರ ?!!