ಇದೊಂದು ಪ್ರವಾಸ ಕಥನವಲ್ಲ. ಗೊತ್ತಿರುವ ವಿಚಾರಗಳನ್ನು ದಾಖಲಿಸಿದರೆ ಯಾರಿಗಾದರೂ ಉಪಯೋಗವಾದಿತೆಂಬ ಆಶಯ. ತಿರುವಣ್ಣಾಮಲೈ, ಅರುಣಾಚಲ ಬೆಟ್ಟದ ತಪ್ಪಲಿನಲ್ಲಿ ಇರುವ ಒಂದು ಪಟ್ಟಣ. ಜಗತ್ತಿಗೆ ಪ್ರಸಿದ್ದ ರಮಣ ಮಹರ್ಷಿಗಳ ಸಿದ್ಧಿ ಕ್ಷೇತ್ರ. ಅರುಣಾಚಲೇಶ್ವರ ಎಂಬ ಪುರಾತನ, ದೊಡ್ಡ ದೇವಸ್ಥಾನ ಇದರ ಮೆರಗು. ಹೀಗಾಗಿ ಆಧ್ಯಾತ್ಮ ಮತ್ತು ಈ ಬೆಟ್ಟದ ಸುತ್ತಲು ನಡೆಯುವ ಚಾರಣದ ಸಮ್ಮಿಲನ.
ನಾವು ಮೂರು ಜನ ಗೆಳೆಯರು, (ನನ್ನೊಡನೆ ನರಸಿಂಹ ಮೂರ್ತಿ, ಬಾಬು ) ಕಾರ್ ನಲ್ಲಿ, ಬೆಳಿಗ್ಗೆ ಸುಮಾರು 8:30ಕ್ಕೆ ಪ್ರಯಾಣ ಶುರು. 230 ಕಿ.ಮೀ. ಇರುವ ಸ್ಥಳಕ್ಕೆ, ನಿದಾನವಾಗಿ ಸಾಕಷ್ಟುಸಲ ವಿರಾಮ ತೆಗೆದುಕೊಂಡು, ತಲುಪಿದಾಗ ಸುಮಾರು 3:00 ಗಂಟೆ. ಅಲ್ಲಿ ಚೆನ್ನೈನಿಂದ ಬಂದಿದ್ದ ಇನ್ನೊಬ್ಬ ಗೆಳೆಯ, ರಾಮನ್, ಕೂಡಿಕೊಂಡ. ಮುಖ ಮಾರ್ಜನ ಮಾಡಿಕೊಂಡು ಆಶ್ರಮಕ್ಕೆ ಹೊರೆಟೆವು. ಸುಮಾರು ಹತ್ತು ಎಕರೆ ಜಾಗ ಇರುವ ಈ ಆಶ್ರಮ, ಸಾಮಾನ್ಯ ದೇವಸ್ಥಾನವಲ್ಲ. ಧ್ಯಾನಕ್ಕಾಗಿ ಇರುವ ದೊಡ್ಡ ಜಾಗ, ರಮಣರ ವಿಗ್ರಹಗಳಿವೆ. ವಸತಿಗೃಹಗಳಿವೆ. ಎರಡು ತಿಂಗಳ ಮೊದಲು ಕಾಯ್ದಿರಿಸಬೇಕು. ಬೇರೆ ಬೇರೆ ಭಾಷೆ ಮಾತಾಡುವ ಐರೋಪ್ಯರು ಇತರ ವಿದೇಶಿಯರು ಎಲ್ಲಾ ಕಡೆ ಬೀಡು ಬಿಟ್ಟಿದ್ದಾರೆ. ಅವರ ಸಾತ್ವಿಕ ಉಡಿಗೆ, ಅಲಂಕಾರ ನೋಡಿದರೆ, ನಮಗೆ ನಾಚಿಕೆ.
ನಂತರ ನಾವು ಅರುಣಾಚಲೇಶ್ವರ ದೇವಸ್ಥಾನಕ್ಕೆ ತೆರಳಿದೆವು. ನಗರದ ಮದ್ಯದಲ್ಲಿರುವ ಈ ದೇವಸ್ಥಾನಕ್ಕೆ ನಾಲ್ಕು ದಿಕ್ಕಿನಲ್ಲಿ ಗೋಪುರಗಳಿವೆ. ಮಧ್ಯದಲ್ಲಿ ಗರ್ಭಗುಡಿಯ ಮೇಲೆ ಮತ್ತೊಂದು ಗೋಪುರ ಇದೆ. ಸುಮಾರು 2 ಕಿ. ಮೀ. ಸುತ್ತಳತೆಯಿರುವ ಬೃಹತ್ ದೇವಾಲಯ. ಇದು ನಾನು ನೋಡಿರುವ ಅತೀ ದೊಡ್ಡ ದೇವಸ್ಥಾನ. ಸಾಮಾನ್ಯವಾಗಿ , ಇಲ್ಲಿ ಎಲ್ಲಾ ದೇವಸ್ಥಾನಗಳಲ್ಲೂ ಲಿಂಗಾರಾಧನೆ. ಪಾರ್ವತಿ/ ಶಕ್ತಿಯ ಆರಾಧನೆ. ಅತ್ಯಂತ ಸೂಕ್ಷ್ಮ ಕೆತ್ತನೆ. ದೊಡ್ಡ ಪ್ರಾಕಾರಗಳು ವಿಶೇಷ. ಅಲ್ಲೊಂದು ನೃತ್ಯದ ಕಾರ್ಯಕ್ರಮ ನಡೆಯುತ್ತಿತ್ತು. . ದೇವಸ್ಥಾನಗಳು ಕಲೆಗೂ ಪ್ರೋತ್ಸಾಹ ಕೊಡುವುದು ಪ್ರಶಂಸನೀಯ. ಅಲ್ಲವೇ ?ಬೆಳಿಗ್ಗೆ ಎದ್ದು, ಪ್ರಾತರ್ವಿಧಿಗಳನ್ನು ಮುಗಿಸಿ, ಗಿರಿವಲಂಗೆ ಹೊರೆಟೆವು. ಇದು 14 ಕೀ. ಮೀ. ದೂರವಿರುವ ಬೆಟ್ಟದ ಸುತ್ತಲೂ ಪ್ರದಕ್ಷಿಣೆ ಮಾಡುವ ವಿಧಿ. ಇದನ್ನೂ ಕೂಡ ಒಂದು ಧಾರ್ಮಿಕ ಕ್ರಿಯೆ ಅಂತ ಹಲವರು ಭಕ್ತಿಯಿಂದ ಪಾದರಕ್ಷೆ ರಹಿತರಾಗಿ ಹೋಗುವುದನ್ನು ಗಮನಿಸಿದೆವು. ಇದು ಸಾರ್ವಜನಿಕ ರಸ್ತೆ. ಆ ರಸ್ತೆಯಲ್ಲಿ ನಡೆದರೆ ಪರ್ವತಕ್ಕೆ ಪ್ರದಕ್ಷಿಣೆ ಆಗುತ್ತದೆ. ಪ್ರತಿ 1 ಕಿ ಮಿ ಗೆ ಒಂದು, ಯಮ, ನಿರುತ,ವಾಯು, ವರುಣ ಇತ್ಯಾದಿ ಲಿಂಗಗಲಿರುವ ದೇವಸ್ಥಾನಗಳಿವೆ. ಸುತ್ತಲೂ ಅಂಗಡಿಗಳಿವೆ. ಎಲ್ಲಾ ತಿಂಡಿಪೋತರಿಗೆ ಬೇಕಷ್ಟು ಸಿಗುವ ವಿವಿಧ ತಿಂಡಿಗಳಿವೆ. ಸವಿಯುತ್ತಾ ನಡಿದೆವು. ಇಲ್ಲಿ 'ಕುಂಬಕೊಣಂ ಡಿಗ್ರಿ ಕಾಫಿ' ಸಿಗುತ್ತದೆ. ಏನೆಂದು ವಿಚಾರಿಸಿದಾಗ, ಅದು ಫಿಲ್ಟರ್ ಕಾಫಿ. ಕೇವಲ ಕಾಫಿ ಬಿಸ್ಕೆಟ್ ಸಿಗುವ ವಿಶೇಷ ಸ್ಥಳ. ಒಳ್ಳೆಯ ಫುಟ್ ಪಾತ್ ನಿರ್ಮಾಣ ಮಾಡಿದ್ದಾರೆ. ಅಲ್ಲಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲಲ್ಲಿ ತಂಗುದಾಣಗಳಿವೆ. ಒಳ್ಳೆಯ ನಡುಗೆ, ಸ್ವಲ್ಪ ಪ್ರಯಾಸವಾದರೂ, ಎಲ್ಲಾರೂ ತೃಪ್ತಿಯಿಂದ ಮುಗಿಸಿದೆವು. ಪಾದಗಳು ಪದ ಹಾಡಿದರೂ, ಉತ್ಸಾಹ ಕಡಿಮೆಯಾಗಲಿಲ್ಲ.

ಸ್ವಲ್ಪ ವಿಶ್ರಾಮದ ನಂತರ, ರಮಣರು ತಪಸ್ಸು ಮಾಡಿದ್ದ, ಸ್ಕಂದಾಶ್ರಮಕ್ಕೆ ಹೊರೆಟೆವು. ಇದು ಬೆಟ್ಟದ ಮೇಲೆ ಇದೆ. ಸುಮಾರು 1.4 ಕಿ. ಮೀ. ದೂರವಿರುವ ಇದು ಕೆಲವೊಮ್ಮೆ, ಸ್ವಲ್ಪ ಕಷ್ಟವಿರುವ, ಮತ್ತೆ ಹಲವೆಡೆ ಸಾದಾರಣ ನಡುಗೆ ಇದೆ. ಕಾಡಿನ ನಡುವೆ, ದಟ್ಟ ಮರಗಳಿವೆ. ಹಕ್ಕಿಗಳ ಹಾಡಿದೆ. ಪ್ರಶಾಂತ ವಾತಾವರಣ. ಇಲ್ಲಿ ಒಟ್ಟು ಎರಡು ಬೇರೆ ಜಾಗಗಳಿವೆ. ಒಂದು ರಮಣರ ತಾಯಿ ಸಮಾದಿಯಾದ ಮತ್ತು ಅವರು 7 ವರ್ಷ ತಪಸ್ಸು ಮಾಡಿದ ಸ್ಥಳ. ಮತ್ತೊಂದು ಒಂದು ಸಂಕೀರ್ಣ ಸ್ಥಳದಲ್ಲಿರುವ ಗುಹೆ. ಈ ಎರಡು ಸ್ಥಳ ಸುಮಾರು ಅರ್ಧ ಕಿ. ಮೀ. ಅಂತರದಲ್ಲಿದೆ. ಸಂಜೆ 4:30ಕ್ಕೆ ಇದನ್ನು ಮುಚ್ಚುತ್ತಾರೆ. ಆದ್ದರಿಂದ 3 ಗಂಟೆಯ ಒಳಗೆ ಏರುವುದು ಒಳಿತು. ಸುಮಾರು 2 ಗಂಟೆ ಒಟ್ಟು ಅವಧಿ ಬೇಕಾಗುತ್ತದೆ. ಇಳಿಯುವಾಗ, ಬೇರೆ ಸ್ವಲ್ಪ ಕಡಿದಾದ ಪ್ರದೇಶದಿಂದ ಇಳಿಯಬಹುದು. ಆಶ್ರಮದ ಕಡಿಯಿಂದ ಹೋರಾಟ ನಾವು, ದೇವಸ್ಥಾನದ ಕಡೆಗೆ ಇಳಿದೆವು. ಇವೆರಡರ ನಡುವೆ 1.5 ಕಿ. ಮೀ ದೂರ. ಎರಡು ಬಾರಿ ಧ್ಯಾನ ಮಾಡುವ ಪ್ರಯತ್ನ ಮಾಡಿದೆ. ಪರಿಣಿತರಾದ ಇಬ್ಬರು ಗೆಳೆಯರಿಗೆ ಇದೊಂದು ಪರ್ವ.ಎರಡು ದಿನಗಳ ಈ ಪ್ರಯಾಣ ಎಲ್ಲರಿಗೂ ತಮ್ಮ ದೃಷ್ಟಿಯಿಂದ ಬೇಕಿದ್ದನ್ನು ಕೊಟ್ಟಿತ್ತು. ಹೊಸದನ್ನು ಕಳೆಸಿತ್ತು. ಆ ಸಣ್ಣ ಪಟ್ಟಣದಲ್ಲಿಯೂ 3 ಸ್ಕ್ರೀನ್ ಇರುವ ಸಿನಿಮಾಮಂದಿರ ನೋಡಿದೆವು. ಹತ್ತಿರದಲ್ಲಿ ತಿರುಕೊಯ್ಲುರ್, ಮತ್ತೊಂದು ಗಿಂಡಿಯಲ್ಲಿ ಕೋಟೆ ಇದೆ. ನಡೆದ ಹುಮ್ಮಸ್ಸಿತ್ತು. ದೇವಸ್ಥಾನದ ದರ್ಶನ, ಧ್ಯಾನದ ಶಾಂತಿ ಎಲ್ಲರಿಗೂ ದೊರೆತಿತ್ತು. ಗೆಳೆಯರ ಒಡನಾಟ, ಮೆಲಕು ಹಾಕಿದ ನೇನಪುಗಳು ಬೋನಸ್. . ಮನಸ್ಸು, ದೇಹ ಎರಡಕ್ಕೂ ಮುದ ನೀಡುವ ಈ ರೀತಿಯ ಪ್ರವಾಸ ಮಾಡಿದರೆ, rejuvinate ಆಗುವುದು ಖಚಿತ. ಹೆಚ್ಚನ ಮಾಹಿತಿ ಗೆ ಗೂಗಲ್ ಮಾತೆ ಇದ್ದಾಳೆ :)


