ಹೀಗೊಂದು ಕಥೆ. ಶ್ರೀಮದ್ಭಾಗವತದ ಉಪಕಥೆ. ಈ ತರಹದ ಕಥೆಗಳು ಹಲವಾರು. ಈ ಕಥೆ ನೆನಪು ಮಾಡಿಕೊಳ್ಳುವ ಕಾರಣ ಕೊನೆಯಲ್ಲಿ.
ಜಡಭರತ ಒಬ್ಬ ದೊಡ್ಡ ಮಹಾರಾಜ. ಮಹಾನ್ ಧರ್ಮಿಷ್ಟ. ಪ್ರಜಾನುರಾಗಿ, ದೇಶವನ್ನು ಸುಭಿಕ್ಷವಾಗಿ ಆಳಿದನು. ಆಗಿನ ಕಾಲದ ವರ್ಣಾಶ್ರಮದ ಅನ್ವಯ, ರಾಜ್ಯವನ್ನು ಬಿಟ್ಟು, ಕಾಡು ಸೇರಿದ. ( ನನ್ನ ವಯಸ್ಸಿನವರಿಗೆ ಕಸಿವಿಸಿ ಆದರೆ ನನ್ನ ತಪ್ಪೇನು ? ) ವಾನಪ್ರಸ್ಥವನ್ನೂ ಯಶಸ್ವಿಯಾಗಿ ಮುಗಿಸಿದ. ನಂತರ ಸನ್ಯಾಸ. ಸಂಪೂರ್ಣವಾಗಿ ಎಲ್ಲಾ ಭೋಗವಸ್ತುಗಳನ್ನೂ ತ್ಯಾಗಮಾಡಿದ. ಹುಲ್ಲಿನಿಂದ, ನದಿಯೊಂದರ ಅಂಚಿನಲ್ಲಿ ಗುಡಿಸಲು ಕಟ್ಟುಕೊಂಡ. ಸದಾ ಧ್ಯಾನಾಸಕ್ತನಾದ. ಸತ್ಯದ ಅನ್ವೇಷಣೆಯಲ್ಲಿ ಕಾಲ ತಳ್ಳಿದ. ಅನೇಕ ಸಂವತ್ಸರಗಳು ಉರುಳಿದವು. ಸಂಪೂರ್ಣ ಯೋಗಿಯಾದ, ಈ ಮಹಾರಾಜ.
ಅದೊಂದು ದಿನ.. ಒಂದು ಬಸುರಿ ಜಿಂಕೆ ಓಡಾಡುತ್ತಿತ್ತು. ಇದಕ್ಕಿದ್ದ ಹಾಗೆ ಹುಲಿಯೊಂದು ಅದನ್ನು ತಿನ್ನಲು ಅಟ್ಟಿಸುಕೊಂಡು ಬಂದಿತು. ಜಿಂಕೆ ಪ್ರಯಾಸದಿಂದ ನದಿ ದಾಟಲು ಎಗರಿತು.
ಎಗರುವಾಗ ದೊಡ್ಡ ಗಾಯಾವಾಗಿ ಕೂಡಲೇ ಸತ್ತುಹೋಯಿತು. ಹೊಟ್ಟೆಯಲ್ಲಿದ್ದ ಮುದ್ದಾದ ಮರಿ ಹೊರಗೆ ಬಂದಿತು. ಸಣ್ಣ ಮರಿ, ಮೈಯೆಲ್ಲಾ ಬಂಗಾರದ ಬಣ್ಣ. ದೃಷ್ಟಿ ತೆಗೆಯಲೆನ್ನುವಂತೆ ಇರುವ ಕಪ್ಪು ಚುಕ್ಕಿಗಳು. ಮನೋಹರವಾಗಿತ್ತು. ನಮ್ಮ ರಾಜ ಯೋಗಿ ಇದೆನ್ನೆಲ್ಲಾ ನೋಡುತಿದ್ದ. ಆತನ ಮನಸ್ಸು ಕರಗಿತು. ಹುಲಿ ಓಡಿಸಿ, ಜಿಂಕೆ ಮರಿಯನ್ನು ತಂದ. ಅದರ ಲಾಲನೆ ಪಾಲನೆ ಶುರು ಮಾಡಿದ. ಹಾಲು ಕುಡಿಸಿದ. ತನ್ನ ಬಳಿಯೇ ಮಲಗಿಸಿಕೊಂಡ. ಅದೊರೊಡನೆ ತನ್ನ ಜೀವನ ಬೆಸೆದುಕೊಂಡ. ಬರಬರುತ್ತಾ, ಅನುರಾಗ ಹೆಚ್ಚಾಗುತ್ತಾ ಹೋಯಿತು. ಅದನ್ನು ಕ್ಷಣವೂ ಬಿಡಲಾರದಾದ. ಪ್ರಾಣಿಸಹಜವಾದ ಆಟ, ಓಟ ಮಾಡಿದರೆ ಅದರ ಹಿಂದಯೇ ಓಡಿದ. ಕಾಡಿನ ಪ್ರಾಣಿಯಾವುದಾದರು ತಿನ್ನುತ್ತದೆ ಎಂಬ ಭಯದಿಂದ ಸದಾ ಅದರೊಡನೆ ಕಾಲ ಕಳೆದ. ತನ್ನ ತಪಸ್ಸು, ಧ್ಯಾನ ಎಲ್ಲಾ ಮರೆತ. ಹೀಗೆ ಮತ್ತಷ್ಟು ಸಂವತ್ಸರಗಳು ಉರುಳಿದವು. ಜಿಂಕೆಗೆ ಸಾವು ಬಂತು. ಅದರ ನೆನಪಿನಲ್ಲೇ ಜಡಭರತ ಕೊನೆಯುಸಿರೆಳೆದ. ಇಷ್ಟು ಸಾಕು. ಭಾಗವತದಲ್ಲಿ ಕಥೆ ಮುಂದುವರೆಯುತ್ತದೆ
ಇನ್ನು ಉಪಸಂಹಾರ. ಸಾಕಷ್ಟು ಜನ ನಾವು pet ಗಳನ್ನು ಸಾಕುತ್ತೇವೆ. ಅತಿಯಾದ ಅಕ್ಕರೆ ಮಮತೆ. ಹೀಗೆ ನಮ್ಮ ಮನೆಯಲ್ಲೊಂದು ಬೆಕ್ಕು. 'ಕೋಕೋ' ಎಂದು ಮಗಳು ನಾಮಕರಣ ಮಾಡಿದ್ದಾಳೆ. ಮನೆಯಲ್ಲರ ಕಣ್ಮಣಿ. ಒಮ್ಮೊಮ್ಮೆ ಮನೆಯಿಂದ ಓಡಿಹೋದರೆ ಏನೋ ಕಳವಳ, ಆತಂಕ. ಕಿರಿಯರಿರಲಿ, ಮನೆಯ ಹಿರಿಯರ ನಡುವಳಿಕೆ ಕೊಡ ಬದಲಾಗಿದೆ. ಇದು ಸರಿಯೇ ? ಅತಿಯಾದ ಪ್ರೇಮ ತಪ್ಪು ಎಂದು ಎಲ್ಲಾ ದಾರ್ಶನಿಕರ ಅಭಿಪ್ರಾಯ. ಜ್ಞಾನಿ, ಸಾದಕ ಜಡಭರತನಿಗೇ ಬಿಡದ ವ್ಯಾಮೋಹ, ನಮ್ಮಂತಹ ಸಾಮಾನ್ಯರನ್ನು ಬಿಟ್ಟೇತೆ ? ಇದು ಕೇವಲ pet ಗಲ್ಲಾ, ಮಡದಿ, ಮಕ್ಕಳು, ಮನೆ, ಈ ಮೋಹಪಾಶದಿಂದ ಬಿಡುಗಡೆ ! ಇನ್ನು ಕಾಲ ಇದೆ ಹುಡುಕೋಣ
ನೀವು ಗೊಂದಲದಲ್ಲಿದ್ದರೆ ಅಥವಾ ಪರಿಹಾರ ಇದ್ದರೆ comment ಮಾಡಿ